‘ಎತ್ತಿನಹೊಳೆ ಯೋಜನೆ’ 430ಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶ ಬಳಕೆಗೆ ಸಮ್ಮತಿಸದ ಕೇಂದ್ರ ಅರಣ್ಯ ಸಚಿವಾಲಯದ ತಜ್ಞರ ಸಮಿತಿ

ಬೆಂಗಳೂರು : ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ‘ಎತ್ತಿನಹೊಳೆ ಯೋಜನೆ’ ಕಾಮಗಾರಿಗೆ ಹಾಸನ-ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ 430ಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ‘ಕೇಂದ್ರ ಅರಣ್ಯ ಸಚಿವಾಲಯದ ತಜ್ಞರ ಸಮಿತಿ’ ತಾತ್ವಿಕ ಅನುಮೋದನೆ ನೀಡಲು ಸಮ್ಮತಿಸಿಲ್ಲ.
ಗುರುವಾರ ಈ ಸಂಬಂಧ ಸಮಿತಿಯು ಮಾಹಿತಿ ನೀಡಿದ್ದು, ‘ಹಾಸನ, ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣೆ ಕಾಲುವೆ ನಿರ್ಮಿಸಲು ತುಮಕೂರಿನ ಬೆಣ್ಣೆಹಳ್ಳದ ಕಾವಲ್, ಕಂಚಿಗಾನಹಳ್ಳಿ ಹಾಗೂ ಹಾಸನದ ಐದಹಳ್ಳಿ ಕಾವಲ್, ಕುಮರಿಹಳ್ಳಿಯ ಅರಣ್ಯ ಭೂಮಿ ಬಳಸಲು ಒಪ್ಪಿಗೆ ನೀಡುವಂತೆ ಕರ್ನಾಟಕ ಅರಣ್ಯ ಇಲಾಖೆಯು ಪ್ರಸ್ತಾವ ಸಲ್ಲಿಸಿತ್ತು. ಈ ಕುರಿತ ಪರಾಮರ್ಶೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿಗೆ ಕಳುಹಿಸಿತ್ತು. ಆದರೆ, ಸಮಿತಿಯು ಯೋಜನೆಯ ಕಾಮಗಾರಿಗೆ ತರಕಾರು ತೆಗೆದಿದೆ.
ಯೋಜನೆಯ ಕಾಲುವೆ ನಿರ್ಮಾಣಕ್ಕೆ ಅಕ್ರಮವಾಗಿ 107ಹೆಕ್ಟೇರ್ ಬಳಕೆ ಮಾಡಿರುವುದನ್ನು ಅಧಿಕಾರಿಗಳ ಸಮಿತಿ ಪತ್ತೆ ಹಚ್ಚಿ ವರದಿ ಸಲ್ಲಿಸಿದೆ. ಆದರೆ, ರಾಜ್ಯ ಸರಕಾರವು 0.04 ಹೆಕ್ಟೇರ್ ಉಲ್ಲಂಘನೆ ಪ್ರಕರಣದಲ್ಲಷ್ಟೆ ಎಫ್‌ಐಆರ್ ದಾಖಲಿಸಿದೆ. ಇದು ಗಂಭೀರ ಲೋಪ. ಯೋಜನೆ ಅನುಷ್ಠಾನ ಗೊಳಿಸುತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮದಿಂದ ಈ ಲೋಪ ಆಗಿದೆಯೇ? ಎಂಬ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಹಾಗೂ ಸಚಿವಾಲಯದ ಪ್ರಾದೇಶಿಕ ಕಚೇರಿ ಜಂಟಿ ವರದಿ ಸಲ್ಲಿಸಬೇಕು. ಪ್ರಾದೇಶಿಕ ಕಚೇರಿಯು ಪ್ರತ್ಯೇಕವಾಗಿ ವರದಿ ಸಲ್ಲಿಸಲು ಅವಕಾಶ ಇದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ. 430 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ಕೋರಿ ರಾಜ್ಯ ಸರಕಾರ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಯೋಜನೆಯ ಅನುಷ್ಠ್ಠಾನದ ಸಂದರ್ಭದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂಬ ಕಾರಣ ನೀಡಿ ಕೇಂದ್ರ ಅರಣ್ಯ ಸಲಹಾ ಸಮಿತಿ ಅನುಮೋದನೆ ನೀಡಿರಲಿಲ್ಲ. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ತಾಕೀತು ಮಾಡಿತ್ತು. ಹೀಗಾಗಿ, ಎತ್ತಿನಹೊಳೆ ಕಾಮಗಾರಿ ಸ್ಥಗಿತವಾಗಿತ್ತು.







