ಫೈನಾನ್ಸ್ ಕಂಪೆನಿಗೆ 47ಕೋಟಿ ರೂ.ವಂಚನೆ ಆರೋಪ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಆ.11: ಬೆಂಗಳೂರು ಮೂಲದ ಫೈನಾನ್ಸ್ ಕಂಪೆನಿಯಿಂದ ಸೈಬರ್ ವಂಚಕರು ಸುಮಾರು 47 ಕೋಟಿ ರೂ. ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ಸಿಸಿಬಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮಾರತ್ಹಳ್ಳಿ ಔಟರ್ ರಿಂಗ್ ರಸ್ತೆಯಲ್ಲಿರುವ ಬೆಂಗಳೂರು ಮೂಲದ ಫೈನಾನ್ಸ್ ಕಂಪೆನಿಯ ಖಾತೆಗೆ ಕನ್ನ ಹಾಕಲಾಗಿದ್ದು, ಕಂಪೆನಿಯ ಹಿರಿಯ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಆಗಸ್ಟ್ 6 ಮತ್ತು 7ರಂದು ಕಂಪೆನಿಯ ಅನುಮತಿ ಇಲ್ಲದೇ ಕೆಲವು ಖಾತೆಗಳಿಗೆ ಅನಿಯಮಿತ ಮತ್ತು ಅನುಮಾನಾಸ್ಪದವಾಗಿ ಹಣ ವರ್ಗಾವಣೆಯಾಗಿದೆ. ಆಗಸ್ಟ್ 7 ರಂದು ಈ ವರ್ಗಾವಣೆಗಳನ್ನು ಗಮನಿಸಿದ ಕಂಪೆನಿಯವರು ಕೂಡಲೇ ತಮ್ಮ ಖಾತೆ ಹೊಂದಿರುವ ಸಂಬಂಧಿತ ಬ್ಯಾಂಕ್ಗಳಿಗೆ ಮಾಹಿತಿ ನೀಡಿ, ಡೆಬಿಟ್ ಫ್ರೀಜ್ ಇರಿಸಿದ್ದಾರೆ. ಆಂತರಿಕ ತನಿಖೆ ನಡೆಸಿದಾಗ ಹಣ ವರ್ಗಾವಣೆಯಾದ ಖಾತೆಗಳು ಕಂಪೆನಿಯ ಕಡೆಯಿಂದ ವೈಟ್ಲಿಸ್ಟ್ ಮಾಡಲಾದ ಖಾತೆಗಳಲ್ಲ. ಮತ್ತು ಅವುಗಳ ಐಪಿ ಅಡ್ರೆಸ್ಗಳು ವಿದೇಶಿ ಮೂಲದವು ಎಂದು ತಿಳಿದು ಬಂದಿದೆ.
ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳನ್ನು ಪಡೆದುಕೊಳ್ಳಲಾಗಿದೆ ಮತ್ತು ಆ ಖಾತೆಗಳು ಎಲ್ಲಿಯವು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಂಪೆನಿಯ ಆಂತರಿಕ ತನಿಖೆಯಲ್ಲಿ ಹಣ ವರ್ಗಾವಣೆ ನಮ್ಮ ಕಂಪೆನಿ ಒಳಗಿನಿಂದ ನಡೆದಿಲ್ಲ, ಐಪಿ ಅಡ್ರೆಸ್ಗಳು ಭಾರತದ ಹೊರಗಿನದ್ದಾಗಿದೆ. ನಮ್ಮ ಆಂತರಿಕ ಲೆಕ್ಕಾಚಾರಗಳ ಆಧಾರದ ಮೇಲೆ ಸರಿ ಸುಮಾರು 47 ಕೋಟಿ ರೂ. ಹಣ ಕಾನೂನುಬಾಹಿರವಾಗಿ ವರ್ಗಾವಣೆಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.







