ಕೆಎಸ್‌ಎಲ್‌ಎಸ್‌ಎ-ಧರೆ ಫೌಂಡೇಷನ್‌ನಿಂದ ಪರಿಸರ ಸಂರಕ್ಷಣಾ ಅಭಿಯಾನ; ರಾಜ್ಯದಾದ್ಯಂತ 5 ಕೋಟಿ ಸಸಿ ನೆಡಲು ನಿರ್ಧಾರ

ಬೆಂಗಳೂರು : ಪರಿಸರ ಸಂರಕ್ಷಣೆಯ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಧರೆ ಫೌಂಡೇಷನ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಎರಡೂ ಸಂಸ್ಥೆಗಳು ಸೇರಿ ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ 5 ಕೋಟಿ ಸಸಿಗಳನ್ನು ನೆಡಲು ಅಭಿಯಾನ ಕೈಗೆತ್ತಿಕೊಳ್ಳಲಿವೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ ಅವರು, ಸರ್ಕಾರದ ನಾನಾ ಇಲಾಖೆಗಳ ಸಹಕಾರದೊಂದಿಗೆ ಬೆಂಗಳೂರು ನಗರದಲ್ಲಿ 2 ಕೋಟಿ ಗಿಡಗಳನ್ನು ನೆಡೆಸಲಾಗುವುದು. ರಾಜ್ಯವ್ಯಾಪಿ ನಡೆಯಲಿರುವ ಈ ಅಭಿಯಾನಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಅರಣ್ಯ ನಾಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ, ನಿಯಮಗಳ ಪ್ರಕಾರ ಅಭಿವೃದ್ಧಿ ಯೋಜನೆಗೆ ಕಡಿಯುವ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಡಬೇಕಾಗಿದೆ. ಆದರೆ, ಆ ಕಾನೂನು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ ಎನ್ನುವುದು ಪ್ರಶ್ನಾರ್ಹವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡಲು ಹಾಗೂ ಹಾಲಿ ಇರುವ ಪರಿಸರ ಸಂರಕ್ಷಿಸಲು ಖಾಸಗಿ ಸಂಸ್ಥೆ ಧರೆ ಫೌಂಡೇಷನ್ ಜತೆ ಕೆಎಸ್‌ಎಲ್‌ಎಸ್‌ಎ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ, ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳ ನೆರವಿನಿಂದ 5 ಕೋಟಿ ಸಸಿಗಳನ್ನು ನೆಡುವ ಅಭಿಯಾನ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರು ನಗರ ಸಹ ಕಾಂಕ್ರೀಟ್ ಕಾಡಾಗುತ್ತಿದ್ದು, ಉತ್ತಮ ಗಾಳಿ ದುರ್ಬಲವಾಗುವ ದಿನಗಳು ದೂರವಿಲ್ಲ ಎನಿಸುತ್ತಿದೆ. ಆದ್ದರಿಂದ, ಬೆಂಗಳೂರಿನಲ್ಲಿ ವಿಧಾನಸೌಧವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು 50 ಕಿ.ಮೀ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರೀನ್ ರಿಂಗ್ ಹೆಸರಿನಲ್ಲಿ ಮಿಯಾವಕಿ ವಿಧಾನವನ್ನು ಬಳಸಿ 2 ಕೋಟಿ ಸಸಿಗಳನ್ನು ನೆಡಿಸಲಾಗುವುದು. ಸರ್ಕಾರದ ಖಾಲಿ ಜಾಗಗಳನ್ನು ಗುರುತಿಸಿ ಸಸಿಗಳನ್ನು ನೆಡಿಸುವ ಮೂಲಕ ಜೀವ ವೈವಿಧ್ಯತೆಯನ್ನು ರಕ್ಷಿಸಲಾಗುವುದು ಎಂದು ತಿಳಿಸಿದರು.
ನಮ್ಮ ಊರು-ನಮ್ಮ ಕೆರೆ ಅಭಿಯಾನ:
ಸರ್ಕಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಸುಮಾರು 42 ಸಾವಿರ ಕೆರೆಗಳಿವೆ. ಅವುಗಳಲ್ಲಿ 3,471 ಕೆರೆಗಳಲ್ಲಿ ನೀರಿಲ್ಲ, 1,195 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ಹಾಗೂ 9,087 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರಿದೆ. ಒಟ್ಟು 15,852 ಕೆರೆಗಳು ಒತ್ತುವರಿಯಾಗಿವೆ. ಆದರಲ್ಲಿ 10,026 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದ್ದು, 5,826 ಕೆರೆಗಳ ಒತ್ತುವರಿ ಇನ್ನೂ ತೆರವುಗೊಳಿಸಬೇಕಾಗಿದೆ ಎಂದು ಶಶಿಧರ್ ಶೆಟ್ಟಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೆರೆಗಳ ಸಂರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಜತೆಗೂಡಿ ಕ್ರಮ ಕೈಗೊಳ್ಳಲಾಗುದು. ಸಾರ್ವಜನಿಕರಲ್ಲಿ ಇದು ನಮ್ಮ ಕೆರೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. 'ನಮ್ಮ ಊರು-ನಮ್ಮ ಕೆರೆ' ಅಭಿಯಾನದ ಮೂಲಕ ಸಾರ್ವಜನಿಕ ಜಾಗೃತಿ ಆಂದೋಲನ ಕೈಗೊಳ್ಳಲಾಗುವುದು. ಪ್ರತಿವರ್ಷ ಕೆರೆಗಳ ಮೌಲ್ಯಮಾಪನ ಮಾಡಲಾಗುವುದು ಎಂದರು.
ಧರೆ ಫೌಂಡೇಷನ್‌ನ ನಿರ್ದೇಶಕ ಡಿ.ಎಂ. ಪೂರ್ಣೇಶ್ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಅರಣ್ಯ ನಾಶ ಮಾಡಲಾಗಿದ್ದು, ಅದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಆದ್ದರಿಂದ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಹೋಗಬೇಕೆನ್ನುವ ಉದ್ದೇಶದಿಂದ ಕೆಎಸ್‌ಎಲ್‌ಎಸ್‌ಎ ಜತೆ ಸೇರಿ ಸಸಿ ನೆಡುವ ಹಾಗೂ ಕೆರೆಗಳನ್ನು ಸಂರಕ್ಷಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಮತ್ತೊರ್ವ ನಿರ್ದೇಶಕ ವೃಷಾಂಕ್ ಭಟ್ ಅವರು, ಫೌಂಡೇಷನ್ ಈಗಾಗಲೇ ರಾಜ್ಯದ ಹಲವಡೆ ಪರಿಸರ ರಕ್ಷಿಸಲು ಸಣ್ಣ ಅರಣ್ಯಗಳನ್ನು ಸೃಷ್ಟಿಸುವ ಕಾರ್ಯ ಮಾಡಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಕೆಎಸ್‌ಎಲ್‌ಎಸ್‌ಎ ಜತೆ ಕೈಜೋಡಿಸಿ ರಾಜ್ಯಾದ್ಯಂತ ಜೀವವೈವಿಧ್ಯತೆ ಸಂರಕ್ಷಣೆಗೆ ನೆರವಾಗುವ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು.






