ಹೆಲ್ಮೆಟ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ : 50 ಸಾವಿರ ರೂ. ದಂಡ

PC : freepik
ಬೆಂಗಳೂರು: ನಗರ ಸಂಚಾರಿ ಪೊಲೀಸರು, ಆರ್ಟಿಓ ಮತ್ತು ಕಾನೂನು ಮಾಪನ ಇಲಾಖೆ ಅಧಿಕಾರಿಗಳು ನಗರದಲ್ಲಿನ ಹೆಲ್ಮೆಟ್ ಅಂಗಡಿ ಮತ್ತು ಮಳಿಗೆಗಳ ಮೇಲೆ ಶನಿವಾರ ದಾಳಿ ಮಾಡಿ ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್ ಮಾರುತ್ತಿದ್ದ ಆರು ಅಂಗಡಿಗಳಿಗೆ 50 ಸಾವಿರ ರೂ. ದಂಡ ವಿಧಿಸಿರುವುದಾಗಿ ತಿಳಿಸಿದ್ದಾರೆ.
ನಗರದ ಸಿದ್ಧಯ್ಯ ರಸ್ತೆ, ಕಲಾಸಿಪಾಳ್ಯ ರಸ್ತೆ, ಲಾಲ್ ಬಾಗ್ ರಸ್ತೆ, ಮಾಗಡಿ ರಸ್ತೆ, ಸುಮನಹಳ್ಳಿ, ವಿಜಯನಗರ, ಅಗ್ರಹಾರ ದಾಸರಹಳ್ಳಿ, ನಾಗರಭಾವಿ, ಔಟರ್ ರಿಂಗ್ ರಸ್ತೆ ಸೇರಿದಂತೆ ಒಟ್ಟು 19 ಸ್ಥಳಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿ ಆರು ಅಂಗಡಿಗಳಿಗೆ 50 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮಾಪನಶಾಸ್ತ್ರ ಕಾಯ್ದೆಯಡಿ 13 ಅಂಗಡಿ ಮಾಲಕರಿಗೆ ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದೇ ವೇಳೆ ಕಳಪೆ ಹಾಗೂ ಅರ್ಧ ಹೆಲ್ಮೆಟ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್ ಸವಾರರಿಗೂ ದಂಡ: ಕಳಪೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ 38 ಸವಾರರಿಗೆ ದಂಡ ವಿಧಿಸಲಾಗಿದ್ದು, ಲೈಸೆನ್ಸ್ ಅಮಾನತು ಮಾಡುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.