ಹಾಸನ ರಸ್ತೆ ಅಪಘಾತ : ಮೃತರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 50 ಲಕ್ಷ ರೂ.ಪರಿಹಾರ ನೀಡಬೇಕು : ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು, ಸೆ. 13: ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಟ್ರಕ್ ಹರಿದು 9 ಮಂದಿ ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದು, ಮೃತರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 50 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಸ್ತೆ ಅಪಘಾತದ ಘಟನೆಬಹಳ ನೋವಾಗಿದೆ. ಈಗಾಗಲೇ ನಮ್ಮ ಪಕ್ಷದ ಆರ್.ಅಶೋಕ್, ಸಿ.ಟಿ.ರವಿ, ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾರಣಾಂತರದಿಂದ ನಾನು ಹೋಗುವುದಕ್ಕೆ ಆಗಲಿಲ್ಲ. ಪ್ರಧಾನಿ ಮೋದಿ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇಂತಹ ಅಚಾತುರ್ಯ ನಡೆಯಬಾರದಿತ್ತು ಎಂದರು.
ದ್ವಿಮುಖ ನೀತಿ: ದಲಿತರ ಬದುಕನ್ನು ಹಸನು ಮಾಡಬೇಕು ಎನ್ನುವ ಭಾವನೆ ಸರಕಾರಕ್ಕೆ ಇಲ್ಲ. ಮತಬ್ಯಾಂಕಿಗಾಗಿ ದಲಿತರ ಪರ ಎನ್ನುತ್ತಾರೆ. ಅಲ್ಪಸಂಖ್ಯಾತರಿಗೆ ಬಹುಮಾನ, ದಲಿತರಿಗೆ ಅವಮಾನ. ಇದು ಕಾಂಗ್ರೆಸ್ಸಿನ ಇಬ್ಬಗೆಯ ನೀತಿಯಾಗಿದೆ. ಇದರ ವಿರುದ್ಧವಾಗಿ ದಲಿತ ಸಮುದಾಯಗಳು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ರಾಜ್ಯ ಸರಕಾರ 400 ಕೋಟಿ ರೂ.ಗಳನ್ನು ಒದಗಿಸಿದೆ. ಅದೇ ರೀತಿಯಲ್ಲಿ ದಲಿತ ಸಮುದಾಯಗಳು ವಾಸಿಸುವ ಕೊಳಚೆ ಪ್ರದೇಶಗಳ ಬಗ್ಗೆ ಕಾಳಜಿ ವಹಿಸಬೇಕಿತ್ತು. ಆದರೆ, ಈ ಸರಕಾರ ಡಾ.ಅಂಬೇಡ್ಕರ್ ಮತ್ತು ಸಂವಿಧಾನ ದ್ರೋಹ ಮಾಡುತ್ತಿದೆ ಎಂದು ದೂರಿದರು.
ಜಾತಿಗೂ ಕ್ರೈಸ್ತರ ಜೋಡಣೆ: ಯಾವುದೇ ಸರಕಾರಕ್ಕೆ ಆಸ್ತಿಕ ಮತ್ತು ನಾಸ್ತಿಕರನ್ನು ಹುಡುಕುವ ಕೆಲಸ ಅಗತ್ಯವಿಲ್ಲ. ಒಕ್ಕಲಿಗ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಬ್ರಾಹ್ಮಣ ಕ್ರೈಸ್ತರು, ದಲಿತ ಕ್ರೈಸ್ತರು ಈ ರೀತಿಯ ಜಾತಿ ಇದೆಯೇ?. ಆದರೆ ಇದರ ಅರ್ಥವೇನೆಂದರೆ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿಯವರನ್ನು ಓಲೈಕೆ ಮಾಡುವುದಕ್ಕಾಗಿ ಜಾತಿ ಜಾತಿಗೂ ಕ್ರೈಸ್ತರನ್ನು ಜೋಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಯಾವ ಜಾತಿಯವರು ಕ್ರೈಸ್ತರಾಗಿ ಮತಾಂತರ ಆಗಿದ್ದರೆ ಅವರು ಕ್ರೈಸ್ತರಾಗುತ್ತಾರೆ. ಆದರೆ ಅವರು ಯಾವ ಜಾತಿಯಿಂದ ಕ್ರೈಸ್ತರಾಗಿದ್ದಾರೆಂಬುದು ನಿಮಗೆ ಏಕೆ ಬೇಕಾಗಿದೆ. ಈ ಕಾಂಗ್ರೆಸ್ ಸರಕಾರ ಮತಾಂತರವನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ. ನಾಸ್ತಿಕ ಮತ್ತು ಆಸ್ತಿಕ ಜನಗಣತಿಯಲ್ಲಿ ಬರಬೇಕಾಗಿಲ್ಲ. ಅದು ವ್ಯಕ್ತಿ ವ್ಯಕ್ತಿಗಳ ಮಧ್ಯದಲ್ಲಿರುವ ನಡವಳಿಕೆ ಎಂದು ಅವರು ನುಡಿದರು.







