ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಎಂ.ಎಸ್.ಐ.ಟಿ ಜೊತೆ ಒಡಂಬಡಿಕೆ | 500 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ

ಬೆಂಗಳೂರು: ಬೀದರ್‌ನ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಮೆಡಿಕಲ್ ಸೋಶಿಯಲ್ ಇನ್ಸ್ಟಿಟ್ಯೂಟ್ ಆಫ್ ತಜಕೀಸ್ತಾನ್(ಎಂ.ಎಸ್.ಐ.ಟಿ) ಜೊತೆ ಒಡಂಬಡಿಕೆಯಾಗಿದ್ದು, 2025-26ನೆ ಶೈಕ್ಷಣಿಕ ಸಾಲಿನಲ್ಲಿ 500 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಲಭಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಅಬ್ದುಲ್ ಖದೀರ್ ತಿಳಿಸಿದರು.
ಗುರುವಾರ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ರಿಚ್ಚಸ್ ಹೋಂನಲ್ಲಿ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾದೇಶಿಕ ಕಚೇರಿಯನ್ನು ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಂ.ಎಸ್.ಐ.ಟಿಯಲ್ಲಿ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ. 500 ವಿದ್ಯಾರ್ಥಿಗಳ ಪೈಕಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಭಾರತದಲ್ಲಿ ದುಬಾರಿ ಶುಲ್ಕಗಳನ್ನು ಪಾವತಿಸಿ ಹಾಗೂ ನೀಟ್‍ನಲ್ಲಿ ಕಡಿಮೆ ಅಂಕಗಳಿಸಿದ ಪರಿಣಾಮ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಿಲ್ಲದಂತಹ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಅಬ್ದುಲ್ ಖದೀರ್ ಹೇಳಿದರು.
ಆರು ವರ್ಷಗಳ ವೈದ್ಯಕೀಯ ಶಿಕ್ಷಣಕ್ಕೆ 32 ಲಕ್ಷ ರೂ.ಗಳನ್ನು 12 ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಶುಲ್ಕ, ಊಟ ಹಾಗೂ ಹಾಸ್ಟೆಲ್, ವೀಸಾ, ದಾಖಲಾತಿ ಶುಲ್ಕ, ನೋಂದಣಿ ಶುಲ್ಕ(ಜಿಎಸ್‍ಟಿಯೊಂದಿಗೆ) ಎಲ್ಲವೂ ಒಳಗೊಳ್ಳುತ್ತದೆ. ದಾಖಲಾತಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಮ್ಮ ವೆಬ್‍ಸೈಟ್ www.msitshaheen.com ಅಥವಾ ಸಹಾಯವಾಣಿ 1800 121 6235ಗೆ ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದರು.
ಈ ಪ್ರಾದೇಶಿಕ ಕಚೇರಿಯ ಮೂಲಕ ಬೆಂಗಳೂರು, ಮೈಸೂರು, ತಮಿಳುನಾಡು, ಆಂಧ್ರ ಪ್ರದೇಶಗಳನ್ನು ತಲುಪಲಿದ್ದೇವೆ. ಶಾಹೀನ್ ಶಿಕ್ಷಣ ಸಂಸ್ಥೆಗಳಲ್ಲಿ ನೀಡುತ್ತಿರುವ ಕೋರ್ಸುಗಳು, ಸೇವೆಗಳ ಕುರಿತು ಈ ಪ್ರಾದೇಶಿಕ ಕಚೇರಿಯಿಂದ ಸಾರ್ವಜನಿಕರು ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಅಬ್ದುಲ್ ಖದೀರ್ ಹೇಳಿದರು.
ಈ ಸಂದರ್ಭದಲ್ಲಿ ಮುಸ್ತಿಮ್ ಮುತ್ತಹಿದ ಮಹಝ್‍ನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಶಿಕ್ಷಣ ತಜ್ಞ ಸೈಯದ್ ತನ್ವೀರ್ ಅಹ್ಮದ್, ಲೇಖಕಿ ಶಾಯಿಸ್ತಾ ಯೂಸುಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







