ನೇಪಾಳದಲ್ಲಿ ಸಿಲುಕಿದ್ದ 54 ಕನ್ನಡಿಗರು ಬೆಂಗಳೂರಿಗೆ ವಾಪಸ್

ನೇಪಾಳ ಪ್ರವಾಹ Photo Credit : PTI
ಬೆಂಗಳೂರು : ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ 54 ಕನ್ನಡಿಗರು ಶನಿವಾರ ರಾತ್ರಿ ಸುರಕ್ಷಿತವಾಗಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ.
ನೇಪಾಳದಿಂದ ಉತ್ತರಪ್ರದೇಶದ ಗೋರಖ್ ಪುರಕ್ಕೆ ಆಗಮಿಸಿದ ಕನ್ನಡಿಗರು, ಅಲ್ಲಿಂದ ನೇರವಾಗಿ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಬೆಂಗಳೂರು, ಹಾವೇರಿ. ಶಿವಮೊಗ್ಗ, ಕಡೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳಕ್ಕೆ ತೆರಳಿದ್ದರು. ಆಗಸ್ಟ್ 26ರಂದು ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಸೇತುವೆಗಳು, ರಸ್ತೆಗಳು ಕೊಚ್ಚಿಹೋಗಿದ್ದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಹೊರಜಗತ್ತಿನ ಸಂಪರ್ಕ ಸಹ ಕಡಿತಗೊಂಡಿದ್ದರಿಂದ ಅವರು ತೀವ್ರ ಪರಿತಪಿಸುವಂತಾಗಿತ್ತು.
ಬದುಕಿ ಬಂದಿರುವುದೇ ಪವಾಡ..!
ಪ್ರವಾಹದಿಂದ ಪಾರಾಗಿ ನಾವು ಬದುಕಿ ಬಂದಿರುವುದು ಒಂದು ಪವಾಡ. ಆ ಭೀಕರ ಪ್ರವಾಹ ನೋಡಿದ ಮೇಲೆ ನಾವು ಬದುಕುಳಿಯುತ್ತೇವೆಯೇ ಎಂಬ ಆತಂಕವಿತ್ತು. ನಾವು ಪ್ರಯಾಣಿಸುತ್ತಿದ್ದ ಮಾರ್ಗ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿತ್ತು, ರಸ್ತೆಗಳು ಕುಸಿದಿದ್ದನ್ನು ನಾವು ಕಣ್ಣಾರೆ ಕಂಡೆವು ಎಂದು ಪ್ರವಾಹಕ್ಕೆ ಸಿಲುಕಿದ್ದ ಹಾವೇರಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ನಾವು ಮುಂದೆ ಪ್ರಯಾಣಿಸಬೇಕಿದ್ದ ರಸ್ತೆ ಪ್ರವಾಹದಲ್ಲಿ ಮುಳುಗಿದೆ ಎಂಬ ಮಾಹಿತಿ ಸಿಕ್ಕಿತು. ಸ್ವಲ್ಪದರಲ್ಲೇ ನಾವು ಪಾರಾದೆವು. ದೂರವಾಣಿ ಸಂಪರ್ಕ ಕಡಿತಗೊಂಡವು. ನಾವು ಕೂಡಲೇ ಬೆಂಗಳೂರಿಗೆ ವಾಪಸ್ ಆಗುವ ನಿರ್ಧಾರ ಮಾಡಿದೆವು ಎಂದಿದ್ದಾರೆ.






