ಮಹಾರಾಣಿ ಕ್ಲಸ್ಟರ್ ವಿವಿ ಅಧ್ಯಾಪಕರ ವೇತನ ಪಾವತಿಗೆ 5.95 ಕೋಟಿ ರೂ. ಬಿಡುಗಡೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.8: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಒಂಬತ್ತು ಅಧ್ಯಾಪಕರಿಗೆ ವೇತನ ಪಾವತಿಸಲು 5.95 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ 60 ವರ್ಷ ವಯೋಮಿತಿ ಪೂರೈಸಿದ ನಂತರ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸೇವೆಯಲ್ಲಿ ಮುಂದುವರೆದು ನಿವೃತ್ತರಾಗಿರುವ ಒಬ್ಬರು ಮತ್ತು ಪ್ರಸ್ತುತ ವಿವಿಯ ಕರ್ತವ್ಯದಲ್ಲಿ ಮುಂದುವರೆದಿರುವ ಎಂಟು ಮಂದಿ ಸೇರಿ ಒಟ್ಟು ಒಂಬತ್ತು ಅಧ್ಯಾಪಕರಿಗೆ ವೇತನ ಪಾವತಿಸಲು ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜು ಶಿಕ್ಷಣ ಇಲಾಖೆಯ ಕೆಲ ಅಧ್ಯಾಪಕರು 60 ವರ್ಷ ವಯೋಮಿತಿ ಮೀರುತ್ತಿದ್ದಂತೆಯೇ ಹೈಕೋರ್ಟ್ನಲ್ಲಿ ದಾವೆ ಹೂಡಿ, ತಡೆಯಾಜ್ಞೆ ಪಡೆದು ಸೇವೆಯಲ್ಲಿ ಮುಂದುವರೆದಿರುತ್ತಾರೆ. ಈ ಅಧ್ಯಾಪಕರಿಗೆ ವೇತನವನ್ನು ಪಾವತಿ ಮಾಡಬೇಕು ಎಂದು ಹೈಕೋರ್ಟ್ನ ಮಧ್ಯಂತರ ತಡೆಯಾಜ್ಞೆಯಲ್ಲಿ ಹೇಳಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ವೇತನ ಬಿಡುಗಡೆಯಾಗದ ಕಾರಣ, ಜೀವನ ನಿರ್ವಹಣೆಗೆ ಹಣವಿಲ್ಲದೆ ಕಷ್ಟಕರವಾಗಿದ್ದು, ತುರ್ತಾಗಿ ವೇತನ ಪಾವತಿಸಬೇಕು ಎಂದು ಈ ಅಧ್ಯಾಪಕರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಅಧ್ಯಾಪಕರಿಗೆ ವೇತನ ಪಾವತಿಸಲು ವಿಶ್ವವಿದ್ಯಾಲಯದಲ್ಲಿ ಹಣವಿರುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಇರುವ ಹಣವನ್ನು ಅಭಿವೃದ್ಧಿ ಕಾರ್ಯ, ಶೈಕ್ಷಣಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೋರ್ಟ್ನ ತಡೆಯಾಜ್ಞೆ ಅನ್ವಯ ಅಧ್ಯಾಪಕರಿಗೆ ವೇತನ/ಬಾಕಿ ವೇತನ ಪಾವತಿಸಲು ಅನುದಾನ ಒದಗಿಸಬೇಕು ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಸಚಿವರು ಸರಕಾರಕ್ಕೆ ಪತ್ರವನ್ನು ಬರೆದಿದ್ದರು.
ಹೀಗಾಗಿ, ಸರಕಾರವು ಈ ಅಧ್ಯಾಪಕರಿಗೆ ವೇತನ ಪಾವತಿಸಲು 5.95 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿ, ಆದೇಶ ಹೊರಡಿಸಿದೆ.







