ಟಿಇಟಿ ಪ್ರಮಾಣ ಪತ್ರ ಹೊಂದಿದ್ದರೆ 6, 7ನೆ ತರಗತಿಗೆ ಬೋಧಿಸಲು ಅರ್ಹ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಅ.19: ರಾಜ್ಯದಲ್ಲಿ 1 ರಿಂದ 5ನೆ ತರಗತಿಗೆ ಬೋಧಿಸುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಟಿಇಟಿ ಪ್ರಮಾಣ ಪತ್ರವನ್ನು ಹೊಂದಿದ್ದಲ್ಲಿ, 6 ಮತ್ತು 7ನೆ ತರಗತಿಗೆ ಬೋಧಿಸಲು ಅರ್ಹರಾಗಿರುತ್ತಾರೆ ಎಂದು ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದೆ.
ಎನ್ಸಿಟಿಇ(ಎನ್ಸಿಟಿಇ) ಮಾರ್ಗಸೂಚಿಗಳಲ್ಲಿ ನಿರ್ಧಿಷ್ಟಪಡಿಸಿದಂತೆ ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿರುವಂತೆ ಅಗತ್ಯ ವಿಷಯಗಳಲ್ಲಿ ಪದವಿಯನ್ನು ಹಾಗೂ ಟಿಇಟಿ ಪ್ರಮಾಣ ಪತ್ರವನ್ನು ಹೊಂದಿದ್ದಲ್ಲಿ, 6 ಮತ್ತು 7ನೆ ತರಗತಿಗೆ ಬೋಧಿಸಲು ಅರ್ಹರಾಗುತ್ತಾರೆ ಎಂದು ಹೇಳಿದೆ.
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು(ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು-1967ಗೆ ತಿದ್ದುಪಡಿ ಮಾಡಿ, ಸರಕಾರವು ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.
ಯಾವುದೇ ವ್ಯಕ್ತಿಯಿಂದ ನಿಗಧಿತ ಅವಧಿಯೊಳಗೆ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಆಕ್ಷೇಪಣೆ ಮತ್ತು ಸಲಹೆಗಳನ್ನು ಸರಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೆ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು - 560 001 ಇವರ ವಿಳಾಸಕ್ಕೆ ಕಳುಹಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.







