ಜಪಾನ್ 600 ಕೋಟಿ ರೂ.ಹೂಡಿಕೆ | ನೈಡೆಕ್ ಕಂಪೆನಿಯ ಆರ್ಚರ್ಡ್ ಹಬ್‍ಗೆ ಚಾಲನೆ ನೀಡಿದ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು : ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಜಪಾನ್ ಮೂಲದ ನೈಡೆಕ್ ಕಂಪೆನಿಯು ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿರುವ ಆರ್ಚರ್ಡ್ ಹಬ್‍ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ್, ನೈಡೆಕ್ ಕಂಪೆನಿಯ ಈ ಸಂಸ್ಥೆಯ ಸ್ಥಾಪನೆಗೆ ಐದು ತಿಂಗಳ ಹಿಂದೆ ನಾನೇ ಭೂಮಿ ಪೂಜೆ ನೆರವೇರಿಸಿದ್ದೆ. ಕಂಪೆನಿಯು ಕೇಳಿದ್ದ ಸವಲತ್ತುಗಳನ್ನೆಲ್ಲ ರಾಜ್ಯ ಸರಕಾರವು ತ್ವರಿತವಾಗಿ ಪೂರೈಸಿದೆ. ಇದಕ್ಕೆ ತಕ್ಕಂತೆ ಕಂಪೆನಿಯು ಕ್ಷಿಪ್ರಗತಿಯಲ್ಲಿ ಅಗಾಧ ಬಂಡವಾಳ ಹೂಡಿ, ಈ ಆಧುನಿಕ ಕೇಂದ್ರವನ್ನು ಸ್ಥಾಪಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.
ನೈಡೆಕ್ ಕಂಪೆನಿಯ ಆರ್ಚರ್ಡ್ ಹಬ್ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯಮ ಕೇಂದ್ರವಾಗಿದೆ. ಇಲ್ಲಿ ಹೊಸಹೊಸ ಔದ್ಯಮಿಕ ಕಲ್ಪನೆಗಳು ಮತ್ತು ಸಂಶೋಧನೆ ಜೊತೆಗೂಡಲಿವೆ. ಅಂತಿಮವಾಗಿ ಇದು ಕೈಗಾರಿಕಾ ಅಭಿವೃದ್ಧಿಯ ಹೆದ್ದಾರಿಯನ್ನು ಸೃಷ್ಟಿಸಲಿವೆ ಎಂದು ಪಾಟೀಲ್ ಅವರು ಬಣ್ಣಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಜಪಾನಿನ ಕಂಪೆನಿಯೊಂದು ಬೃಹತ್ ಮೊತ್ತದ ಬಂಡವಾಳ ಹೂಡಿಕೆ ಯೋಜನೆ ಇದಾಗಿದೆ. ಇದರಿಂದ ಇಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದ್ದು, ಪರೋಕ್ಷವಾಗಿ ಸ್ಥಳೀಯರಿಗೆ ಲಾಭವಾಗಲಿದೆ. ರಾಜ್ಯ ಸರಕಾರವು ತನ್ನ ಹೊಸ ಕೈಗಾರಿಕಾ ನೀತಿಯಲ್ಲಿ ಬೆಂಗಳೂರನ್ನು ಹೊರತುಪಡಿಸಿ ಬೇರೆ-ಬೇರೆ ಭಾಗಗಳಲ್ಲಿ ಉದ್ಯಮ ಸ್ಥಾಪಿಸುವಂತೆ ಹಲವು ರಚನಾತ್ಮಕ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನೈಡೆಕ್ ಕಂಪೆನಿ ಸೇರಿದಂತೆ ಜಪಾನಿನ ಹತ್ತಾರು ಕಂಪೆನಿಗಳು ಕರ್ನಾಟಕ ರಾಜ್ಯದಲ್ಲಿ ನೆಲೆಯೂರಿದ್ದು, ನಮ್ಮಲ್ಲಿ ಜಪಾನಿ ಕೈಗಾರಿಕಾ ಟೌನ್‍ಶಿಪ್ ಕೂಡ ಇದೆ. ತಾವು ಇತ್ತೀಚಿಗೆ ಜಪಾನಿಗೆ ಭೇಟಿ ನೀಡಿದಾಗ ರಾಜ್ಯಕ್ಕೆ 4,500ಕೋಟಿ ರೂ.ಗಳ ಬಂಡವಾಳ ಹೂಡಿಕೆ ಖಾತ್ರಿ ಸಿಕ್ಕಿದೆ. ನಮ್ಮ ಹಿಂದಿನ ಬಾರಿಯ ಜಪಾನ್ ಮತ್ತು ದಕ್ಷಿಣ ಕೊರಿಯಾ ಭೇಟಿಯಲ್ಲಿಯೂ 6ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಬಂದಿತು ಎಂದು ಪಾಟೀಲ್ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ್, ನೈಡೆಕ್ ಕಾರ್ಪೊರೇಷನ್ ಅಧ್ಯಕ್ಷ ಹಿರೋಶಿ ಕೋಬೆ, ಕಂಪೆನಿಯ ಮೋಷನ್ ಮತ್ತು ಎನರ್ಜಿ ವಿಭಾಗದ ಮುಖ್ಯಸ್ಥ ಮೈಕೆಲ್ ಬ್ರಿಗ್ಸ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







