ಬೃಹತ್ ಇ-ಖಾತಾ ಮೇಳ: ಸ್ಥಳದಲ್ಲಿಯೇ 677 ಅಂತಿಮ ಇ-ಖಾತೆಗಳ ವಿತರಣೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ರವಿವಾರ ಏರ್ಪಡಿಸಿದ್ದ ‘ಬೃಹತ್ ಇ-ಖಾತಾ ಮೇಳ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.
ಬೃಹತ್ ಇ-ಖಾತಾ ಮೇಳದಲ್ಲಿ 4 ಸಾವಿರ ಜನರಿಗೆ ಟೋಕನ್ ನೀಡಲಾಗಿದ್ದು, 1,679 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. 677 ಅರ್ಜಿಗಳನ್ನು ಅನುಮೋದಿಸಿ ಸ್ಥಳದಲ್ಲಿಯೇ ಅಂತಿಮ ಇ-ಖಾತಾ ನೀಡಲಾಗಿದೆ. ಇ-ಖಾತಾ ಮೇಳಕ್ಕೆ ಹೆಚ್ಚಿನ ನಿರೀಕ್ಷೆಗೂ ಮೀರಿ ಬಂದ ಪರಿಣಾಮ ಸೋಮವಾರವೂ(ಜೂ.30) ಖಾತಾ ಮೇಳವನ್ನು ಮುಂದುವರಿಸಲಾಗುವುದು.
ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ವಾರ್ಡ್ ಗಳು ಬರಲಿದ್ದು, 3 ಉಪ ವಿಭಾಗಗಳಿಗೆ ಪ್ರತ್ಯೇಕವಾಗಿ ಬಣ್ಣ ಆಧಾರಿತ ಕೌಂಟರ್ ಗಳನ್ನು ಸ್ಥಾಪಿಸಲಾಗಿತ್ತು. ಅದರ ಜೊತೆಗೆ ಬೇರೆ ವಲಯಗಳಿಂದ ಬರುವವರಿಗೂ ಪ್ರತ್ಯೇಕ ಕೌಂಟರ್ ಅನ್ನು ಸ್ಥಾಪಿಸಲಾಗಿತ್ತು. 100ಕ್ಕೂ ಹೆಚ್ಚು ಲ್ಯಾಪ್ ಟಾಪ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ಇ -ಖಾತೆಗಾಗಿ ಕೋರಿ ಬರುವ ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ರೀತಿ ಇ-ಖಾತಾ ಮಾಡಿಕೊಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಎಂದು ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







