ಬೆಂಗಳೂರು | ಜೆಜೆ ನಗರ ಚಂದ್ರು ಹತ್ಯೆ ಪ್ರಕರಣ: ಇಬ್ಬರಿಗೆ 7 ವರ್ಷ ಕಾರಾಗೃಹ ಶಿಕ್ಷೆ ಪ್ರಕಟ

ಬೆಂಗಳೂರು: ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಿಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ 51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ(ಸಿಐಡಿ ವಿಶೇಷ ನ್ಯಾಯಾಲಯ) ಆದೇಶ ಹೊರಡಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಶಾಹೀದ್ ಪಾಷಾ ಮತ್ತು ಗೇಣಾ ಎಂಬಾತನಿಗೆ ಐಪಿಸಿ 304ರಡಿ ಅಪರಾಧಕ್ಕಾಗಿ 7 ವರ್ಷಗಳ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ, ಐಪಿಸಿ 506ರಡಿ ಅಪರಾಧಕ್ಕಾಗಿ 3 ವರ್ಷಗಳ ಶಿಕ್ಷೆ ಮತ್ತು ತಲಾ 5 ಸಾವಿರ ರೂ., ದಂಡ ಹಾಗೂ ಐಪಿಸಿ 27 (1) ಆಯುಧ ಕಾಯ್ದೆಯ ಅಪರಾಧಕ್ಕಾಗಿ 3 ವರ್ಷಗಳ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ.
2022ರ ಎಪ್ರಿಲ್ 4 ರಂದು ರಾತ್ರಿ ಜೆಜೆ ನಗರ ಠಾಣೆ ವ್ಯಾಪ್ತಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಸ್ನೇಹಿತ ಸೈಮನ್ ರಾಜ್ ಜೊತೆ ಚಿಕನ್ ರೋಲ್ ತಿನ್ನಲು ಚಂದ್ರು ಹೊರಟಿದ್ದ. ಹಳೇಗುಡ್ಡದಹಳ್ಳಿ ಆರೋಪಿಗಳ ಬೈಕ್ ಹಾಗೂ ಸೈಮನ್ ರಾಜ್ ಚಲಾಯಿಸುತ್ತಿದ್ದ ಸ್ಕೂಟರ್‍ಗೆ ಢಿಕ್ಕಿಯಾಗಿತ್ತು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿತ್ತು.
ಈ ವೇಳೆ ಆರೋಪಿ ಶಾಹೀದ್ ತನ್ನ ಬಳಿಯಿದ್ದ ಚಂದ್ರುವಿನ ಬಲ ತೊಡೆಗೆ ಚುಚ್ಚಿ ಹತ್ಯೆಗೈದಿದ್ದ. ಸೈಮನ್ ರಾಜ್ ನೀಡಿದ್ದ ದೂರಿನನ್ವಯ ಜೆ. ಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ಪ್ರಕರಣ ಗಂಭೀರತೆ ಪಡೆಯುತ್ತಿದ್ದಂತೆ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು. ತನಿಖಾ ಕಾಲದಲ್ಲಿ 30 ಜನ ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಐಡಿ ಅಧಿಕಾರಿಗಳು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.







