‘ಕರ್ತವ್ಯ ಆಪ್’ ನೋಂದಣಿ: ಶೇ.70.6ರಷ್ಟು ಪ್ರಗತಿ ಸಾಧನೆ

ಬೆಂಗಳೂರು : ‘ಕರ್ತವ್ಯ’ ಆಪ್‍ನಲ್ಲಿ ಶೇ.70.6ಕ್ಕಿಂತ ಹೆಚ್ಚು ನೌಕರರು ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.
‘ಕರ್ತವ್ಯ ಆಪ್‍ನಲ್ಲಿ 2.13ಲಕ್ಷ ಉದ್ಯೋಗಿಗಳು ನೋಂದಣಿಯಾಗಿಲ್ಲ’ ಎಂಬ ಕೆಲವು ಮಾಧ್ಯಮಗಳ ವರದಿಗಳಿಗೆ ಸರಕಾರ ಸ್ಪಷ್ಟೀಕರಣ ನೀಡಿದ್ದು, 2,13,925 ನೌಕರರ ನೋಂದಣಿಯ ಅಂಕಿ-ಅಂಶಗಳು ಜೂ.12ರ ವರೆಗಿನ ಮಾಹಿತಿಯಾಗಿದ್ದವು. ಆದರೆ ನಾಲ್ಕೈದು ದಿನಗಳಲ್ಲಿ ನಡೆಸಲಾದ ವಿಶೇಷ ಆಂದೋಲನದಿಂದಾಗಿ ಈ ಸಂಖ್ಯೆ ಜೂ.18ರ ವೇಳೆಗೆ 1,40,433ಕ್ಕೆ ಕುಸಿದಿದೆ. ಹೀಗಾಗಿ ವಾರದಲ್ಲಿ ನೋಂದಣಿಯಾಗದ ನೌಕರರ ಸಂಖ್ಯೆಯಲ್ಲಿ ಶೇ.34.4ರಷ್ಟು ಭಾರಿ ಇಳಿಕೆಯಾಗಿದೆ.
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ದತ್ತಾಂಶದ ಪ್ರಕಾರ, ಒಟ್ಟು 43ಪ್ರಮುಖ ಇಲಾಖೆಗಳು ಹಾಗೂ 137ಸರಣಿ ಇಲಾಖೆಗಳು, ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 4,78,181ನೌಕರರ ಪೈಕಿ 3,37,748(ಶೇ.70.6) ನೌಕರರು ಈಗಾಗಲೇ ಆಪ್‍ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಜೂ.18ರ ಬೆಳಗ್ಗೆ 11ಗಂಟೆಯ ಒಳಗೆ ಒಟ್ಟು ನೋಂದಾಯಿತ ಬಳಕೆದಾರರಲ್ಲಿ ಸುಮಾರು ಶೇ.57ರಷ್ಟು (1,92,605 ನೌಕರರು) ಉದ್ಯೋಗಿಗಳು ಆಪ್ ಮೂಲಕ ತಮ್ಮ ಹಾಜರಾತಿಯನ್ನು ದಾಖಲಿಸಿದ್ದಾರೆ. ಬಾಕಿ ಉಳಿದಿರುವ ಶೇ.29.4ರಷ್ಟು ನೌಕರರ ನೋಂದಣಿಗಾಗಿ ಇ-ಆಡಳಿತ ಕೇಂದ್ರವು ವಿಶೇಷ ತರಬೇತಿ ಮತ್ತು ನೋಂದಣಿ ಶಿಬಿರಗಳನ್ನು ಆಯೋಜಿಸಿದೆ. ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ನೋಡಲ್ ಅಧಿಕಾರಿಗಳು, ಸಹಾಯವಾಣಿ ಮತ್ತು ಎಐ ಆಧಾರಿತ ವಾಯ್ಸ್ ಬಾಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಎಲ್ಲ ಅಧಿಕಾರಿಗಳು ಮತ್ತು ನೌಕರರು ನಿಗದಿತ ಸಮಯದೊಳಗೆ ಶೇ.100ರಷ್ಟು ನೋಂದಣಿ ಪೂರ್ಣಗೊಳಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಎಲ್ಲ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.






