ಲೋಕಾಯುಕ್ತರ ವ್ಯಾಪ್ತಿಯಲ್ಲಿ 7110 ಪ್ರಕರಣಗಳು ವಿಚಾರಣೆಯಾಗದೆ ಬಾಕಿ

ಬೆಂಗಳೂರು: 2023ರ ಎಪ್ರಿಲ್‍ನಿಂದ 2025ರ ಜೂನ್ ಅಂತ್ಯದವರೆಗಿನ ರಾಜ್ಯ ಲೋಕಾಯುಕ್ತರ ವ್ಯಾಪ್ತಿಗೆ ಒಳಪಟ್ಟ 7110 ಪ್ರಕರಣಗಳು ವಿಚಾರಣೆಯಾಗದೆ ಬಾಕಿ ಉಳಿದಿವೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
ಗುರುವಾರ ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ಸಂಸ್ಥೆಯು, ಲೋಕಾಯುಕ್ತರ ವ್ಯಾಪ್ತಿಯಲ್ಲಿ 3429 ಪ್ರಕರಣಗಳು ವಿಲೇವಾರಿಗೊಂಡಿವೆ. ಉಪಲೋಕಾಯುಕ್ತ-1ರ ವ್ಯಾಪ್ತಿಗೆ ಸಂಬಂಧಿಸಿದಂತೆ 6927 ಪ್ರಕರಣಗಳು ಬಾಕಿ ಉಳಿದಿದ್ದು, 5106 ಪ್ರಕರಣಗಳು ವಿಲೇವಾಗಿದೆ ಎಂದು ಹೇಳಿದೆ.
ಉಪಲೋಕಾಯುಕ್ತ-2ರ ವ್ಯಾಪ್ತಿಗೆ ಸಂಬಂಧಿಸಿದಂತೆ 2024ರ ಜುಲೈನಿಂದ 2025ರ ಜೂನ್ ಅಂತ್ಯದವರೆಗೆ 8647 ಪ್ರಕರಣಗಳು ವಿಚಾರಣೆಯಿಲ್ಲದೆ ಬಾಕಿ ಉಳಿದಿದ್ದು, 3080 ಪ್ರಕರಣಗಳು ವಿಲೇವಾರಿಗೊಂಡಿವೆ. ಲೋಕಾಯುಕ್ತ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರನ್ನು ಹೇಳಿಕೊಂಡು, ಹಣ ವಸೂಲಿ ಮಾಡುತ್ತಿರುವ ಕುರಿತಂತೆ ಸ್ವಯಂ ಪ್ರೇರಿತವಾಗಿ ಸ್ವೀಕರಿಸಿದ ಹಾಗೂ ಮಾಹಿತಿ ಬಂದ ತಕ್ಷಣವೇ ಅಂತಹವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಒಟ್ಟು 41 ಪ್ರಕರಣಗಳು ದಾಖಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.
ಉಪಲೋಕಾಯುಕ್ತ-1ರಲ್ಲಿ ಹಿಂದಿನ ಎರಡು ವರ್ಷಗಳಲ್ಲಿ 324 ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿದ್ದು, ಪ್ರಸ್ತುತ 55 ಪ್ರಕರಣಗಳು ಮುಕ್ತಾಯವಾಗಿದ್ದು, ಇನ್ನುಳಿದ ಪ್ರಕರಣಗಳು ಪ್ರಗತಿಯಲ್ಲಿವೆ. ಉಪಲೋಕಾಯುಕ್ತ-2ರಲ್ಲಿ 170 ಸ್ವಯಂ ಪ್ರೇರಿತ ದೂರು ಪ್ರಕರಣಗಳನ್ನು ದಾಖಲಿಸಿದ್ದು, ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಲೋಕಾಯುಕ್ತ ಸಂಸ್ಥೆ ವಿವರಿಸಿದೆ.
ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಂಡ ನಂತರ ಭ್ರಷ್ಟಾಚಾರ ನಿಗ್ರಹ ದಳದಿಂದ ಈ ಸಂಸ್ಥೆಗೆ ವರ್ಗಾವಣೆಗೊಂಡ 2159 ಪ್ರಕರಣಗಳೊಂದಿಗೆ 2022ರಿಂದ ಈವರೆಗೂ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗದಲ್ಲಿ 205 ದಾಳಿ ಪ್ರಕರಣಗಳು, 645 ಟ್ರ್ಯಾಪ್ ಪ್ರಕರಣಗಳು, 77 ಇತರೆ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಎಲ್ಲ ಜಿಲ್ಲಾ ಸರಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಜಿಲ್ಲಾ ಲೋಕಾಯುಕ್ತ ಕಚೇರಿಯ ನಾಮಫಲಕ, ಸಹಾಯವಾಣಿ ಸಂಖ್ಯೆ ಹಾಗೂ ಯಾವ ಯಾವ ಸಂದರ್ಭಗಳಲ್ಲಿ ದೂರು ಅರ್ಜಿ ಸಲ್ಲಿಸಬಹುದು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಲೋಕಾಯುಕ್ತ ನಿಬಂಧಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







