ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 8ನೇ ವರದಿಯಲ್ಲಿ ಸರಕಾರಕ್ಕೆ 189 ಹೊಸ ಶಿಫಾರಸ್ಸು : ಆರ್.ವಿ.ದೇಶಪಾಂಡೆ

ಬೆಂಗಳೂರು : ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು, ಆಡಳಿತಾತ್ಮಕ ದಕ್ಷತೆಯನ್ನು ಸುಧಾರಿಸಲು ಮತ್ತು ನಾಗರಿಕ ಸೇವೆಗಳನ್ನು ಸಮಯೋಚಿತವಾಗಿ ತಲುಪಿಸುವ ಉದ್ದೇಶದಿಂದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು 8ನೆ ವರದಿಯಲ್ಲಿ 189 ಹೊಸ ಶಿಫಾರಸ್ಸುಗಳನ್ನು ಮಾಡಿದೆ ಎಂದು ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಎಂಟನೇ ವರದಿ ಬಿಡುಗಡೆಗೊಳಿಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಯೋಗವು ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅಧ್ಯಕ್ಷತೆಯಲ್ಲಿ ಆಳವಾದ ಅಧ್ಯಯನ ನಡೆಸಿ ಮೂರು ವರ್ಷಗಳಲ್ಲಿ ಏಳು ವರದಿಗಳನ್ನು ಸಲ್ಲಿಸಿದ್ದು, ಒಟ್ಟಾರೆ ಆಡಳಿತಾತ್ಮಕ ಸುಧಾರಣೆಗೆ 5,039 ಶಿಫಾರಸ್ಸುಗಳನ್ನು ಮಾಡಿದೆ ಎಂದರು.
1506 ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ. 201 ಶಿಫಾರಸ್ಸುಗಳನ್ನು ಭಾಗಶಃ ಜಾರಿಗೆ ತರಲಾಗಿದೆ ಮತ್ತು ಸುಮಾರು 957 ಶಿಫಾರಸ್ಸುಗಳು ಅನುಷ್ಠಾನದ ಹಂತದಲ್ಲಿವೆ ಎಂದ ಅವರು, 8ನೆ ವರದಿಯು ಹಿಂದಿನ ವರದಿಗಳಲ್ಲಿ ಸೇರ್ಪಡೆಯಾಗದ ಇಲಾಖೆಗಳಾದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮತ್ತು ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಗಳನ್ನು ಒಳಗೊಂಡು ವಲಯದ ಉದ್ಯಮಗಳು ಮತ್ತು ಮಧ್ಯಸ್ಥಗಾರರ ಸಲಹೆಯ ಆಧಾರದ ಮೇಲೆ ಆಯೋಗವು 189 ಹೊಸ ಶಿಫಾರಸ್ಸುಗಳನ್ನು ಮಾಡಿದೆ ಎಂದರು.
ಈಗಾಗಲೇ ಶೇ.30 ರಷ್ಟು ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಒಟ್ಟಾರೆ ಶೇ.53ಕ್ಕೂ ಹೆಚ್ಚು ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವತ್ತ ತೀವ್ರ ಕ್ರಮ ಜರುಗಿಸಲಾಗಿದ್ದು, ಇದು ಕರ್ನಾಟಕ ಆಡಳಿತಾತ್ಮಕ ಸುಧಾರಣೆಯಲ್ಲಿ ಒಂದು ಮಹತ್ತರವಾದ ಹೆಜ್ಜೆಯಾಗಿದೆ ಎಂದು ಅವರು ಉಲ್ಲೇಖಿಸಿದರು.
ಪ್ರಮುಖ ಶಿಫಾರಸ್ಸು: ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಯ ರಚನೆ, ಡಿಜಿಟಲ್ ಟ್ಯಾಕಿಂಗ್ ಕಾರ್ಯವಿಧಾನ ಅಳವಡಿಕೆ, ಇಲಾಖೆಗಳ ನಡುವೆ ಸಮನ್ವಯವನ್ನು ಬಲಪಡಿಸುವುದು. ಅನುಷ್ಠಾನಕ್ಕೆ ಸರಕಾರಿ ಆದೇಶಗಳು ಮತ್ತು ಸುತ್ತೋಲೆಗಳನ್ನು ಹೊರಡಿಸುವುದು, ತ್ರೈಮಾಸಿಕವಾಗಿ ಸಚಿವ ಸಂಪುಟ ಮಟ್ಟದಲ್ಲಿ ಪರಿಶೀಲನೆ, ನೀತಿಯ ನಿರ್ಧಾರಗಳು, ಅನುಷ್ಠಾನಗೊಂಡ ಶಿಫಾರಸ್ಸುಗಳ ಪರಿಣಾಮವನ್ನು ಸಮೀಕ್ಷೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕಾರ್ಯತಂತ್ರವನ್ನು ಆಳವಡಿಸಿಕೊಳ್ಳಬೇಕು ಎಂದು ಆಯೋಗವು ಬಲವಾಗಿ ಶಿಫಾರಸ್ಸು ಮಾಡಿದೆ ಎಂದೂ ಅವರು ಹೇಳಿದರು.
23 ಇಲಾಖೆಗಳಲ್ಲಿ 15,000 ಮಹತ್ವದ ನಿರ್ಣಾಯಕ ಖಾಲಿ ಹುದ್ದೆಗಳನ್ನು ಗುರುತಿಸಿದೆ. ಈ ಹುದ್ದೆಗಳನ್ನು ಮೊದಲ ಆದ್ಯತೆಯಲ್ಲಿ ಭರ್ತಿ ಮಾಡಲು ಹಾಗೂ ದೇವಾಲಯಗಳಲ್ಲಿ ಹೊಸ ಹುದ್ದೆಗಳ ಮಂಜೂರಾತಿಗಾಗಿ ಕಾರ್ಯದರ್ಶಿ, ಧರ್ಮಾದಾಯ ದತ್ತಿ ಆಯುಕ್ತರಿಗೆ ಅಧಿಕಾರ ಪ್ರತ್ಯಾಯೋಜನೆ, ಹೆಚ್ಚಿನ ಜನಸಂದಣಿ ಇರುವ ದೇವಾಲಯಗಳಲ್ಲಿ, ವಿಶೇಷವಾಗಿ ಹಬ್ಬಗಳು, ಜಾತ್ರೆಗಳು ಮತ್ತು ಇತರ ಶುಭ-ಸಮಾರಂಭಗಳ ಸಮಯದಲ್ಲಿ ಭಕ್ತರು ಹಗಲು ಮತ್ತು ರಾತ್ರಿಯಿಡೀ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಮಯದಲ್ಲಿ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ದೇವಾಲಯ ಕಾರ್ಯಪಡೆಯನ್ನು ಸ್ಥಾಪಿಸಲು ಶಿಫಾರಸ್ಸು ಮಾಡಲಾಗಿದೆ ಎಂದರು.
ಈ ಹಿಂದೆ ವಿಧಾನಸೌಧದ ಬಳಿ ಸರಕಾರಿ ಕೇಂದ್ರ ಲೇಖನ ಸಾಮಗ್ರಿಗಳ ಮಳಿಗೆ ಇದ್ದು, ಇದು ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಎಲ್ಲ ಇಲಾಖೆಗಳು ಮತ್ತು ಪ್ರಮುಖ ಸರಕಾರಿ ಕಚೇರಿಗಳಿಗೆ ಲೇಖನ ಸಾಮಗ್ರಿಗಳ ಪರಿಣಾಮಕಾರಿ ಮತ್ತು ಸಕಾಲಿಕ ಪೂರೈಕೆಯನ್ನು ನಿರ್ವಹಿಸುತ್ತಿತ್ತು. ಈಗ ಮೈಸೂರು ರಸ್ತೆಯ ಕೆಂಗೇರಿ ಕೇಂದ್ರ ಮುದ್ರಣಾಲಯಕ್ಕೆ ಇದು ಸ್ಥಳಾಂತರಗೊಂಡಾಗಿನಿಂದ ಹೆಚ್ಚಿದ ದೂರ, ದೀರ್ಘ ಪ್ರಯಾಣದ ಸಮಯ ಮತ್ತು ಹೆಚ್ಚಿನ ಸಾರಿಗೆ ವೆಚ್ಚಗಳಿಂದಾಗಿ ಲೇಖನ ಸಾಮಗ್ರಿಗಳ ಪೂರೈಕೆಯನ್ನು ನಿರ್ವಹಿಸುವಲ್ಲಿ ತೊಂದರೆಗಳು ಉದ್ಭವಿಸಿವೆ. ಆದ್ದರಿಂದ, ವಿಧಾನಸೌಧ, ವಿಕಾಸಸೌಧ ಅಥವಾ ಬಹುಮಹಡಿ ಕಟ್ಟಡದ ಬಳಿ ಸರಕಾರಿ ಕೇಂದ್ರ ಲೇಖನ ಸಾಮಗ್ರಿ ಮಳಿಗೆಯನ್ನು ಸ್ಥಾಪಿಸಲು ಶಿಫಾರಸ್ಸು ಮಾಡಲಾಗಿದೆ ಎಂದೂ ಅವರು ವಿವರಿಸಿದರು.
15 ವರ್ಷಕ್ಕಿಂತ ಹಳೆಯದಾದ ಯಂತ್ರಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ವರದಿಯಾಗಿದೆ ಮತ್ತು ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ. ಅತ್ಯಂತ ಹಳೆಯ ಯಂತ್ರಗಳನ್ನು ಬದಲಾಯಿಸುವುದು ಮಾತ್ರವಲ್ಲದೆ, ಐಟಿಐ ಮತ್ತು ಪಾಲಿಟೆಕ್ನಿಕ್ ಪ್ರಯೋಗಾಲಯಗಳನ್ನು ಪ್ರಸ್ತುತ ಪಠ್ಯಕ್ರಮಕ್ಕೆ ಉನ್ನತೀಕರಿಸಲು ಶಿಫಾರಸ್ಸು ಮಾಡಲಾಗಿದೆ.
ಅನರ್ಹತೆ ಮಾನದಂಡಗಳ ಪ್ರಕಾರ, 3 ಹೆಕ್ಟೇರ್ ಗಿಂತ ಹೆಚ್ಚು ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿಯನ್ನು ಹೊಂದಿರುವವರ ಭೂ ವಿವರಗಳ ಪರಿಶೀಲನೆಗಾಗಿ ಪಡಿತರ ಚೀಟಿಗಳ ಡೇಟಾಬೇಸ್ ಅನ್ನು ಭೂಮಿ ಡೇಟಾಬೇಸ್ ನೊಂದಿಗೆ ಸಂಯೋಜಿಸಬೇಕು ಎಂದು ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ದೇಶಪಾಂಡೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಸಲಹೆಗಾರ ಪ್ರಸನ್ನ, ವಿಶೇಷ ಕಾರ್ಯದರ್ಶಿ ರಮೇಶ್ ದೇಸಾಯಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







