ಬೆಂಗಳೂರು | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ.81.25ರಷ್ಟು ಪ್ರಗತಿ : ಜಿ.ಎನ್.ಶ್ರೀಕಂಠಯ್ಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.15: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಬೆಂಗಳೂರು ನಗರ ಜಿಲ್ಲೆಯು ಶೇ. 81.25 ರಷ್ಟು ಪೂರ್ಣಗೊಳಿಸಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್.ಶ್ರೀಕಂಠಯ್ಯ ಶ್ಲಾಘಿಸಿದರು.
ಬುಧವಾರ ನಗರದ ಕೆ.ಜಿ.ರಸ್ತೆಯಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯವು ನಡೆಸುವುದು ತುಂಬ ಕಷ್ಟದ ಕೆಲಸ. ಏಕೆಂದರೆ ಇಲ್ಲಿ ಬಹು ಸಂಖ್ಯೆಯಲ್ಲಿ ಅಪಾರ್ಟ್ಮೆಂಟ್ ಗಳಿದ್ದು, ಜನರು ಪ್ರತಿದಿನ ನೌಕರಿಗೆ ತೆರಳುವುದರಿಂದ ಬೆಳಗ್ಗೆ ಮನೆಗಳಲ್ಲಿ ಲಭ್ಯವಿರುವುದಿಲ್ಲ. ಕೆಲವು ಸಂದರ್ಭದಲ್ಲಿ ಗಣತಿದಾರರಿಗೆ ಸಾರ್ವಜನಿಕರು ಮಾಹಿತಿಯನ್ನು ನೀಡಲು ತಿರಸ್ಕರಿಸುತ್ತಾರೆ. ಇಂತಹ ಸವಾಲುಗಳ ನಡುವೆಯೂ ಗಣತಿದಾರರು ಉತ್ತಮವಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರಗತಿಯು ಜಿಲ್ಲಾಡಳಿತದ ಕಾರ್ಯ ವೈಖರಿಯನ್ನು ಎತ್ತಿ ಹಿಡಿದಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿರುವುದೆ ಈ ಪ್ರಗತಿಗೆ ಕಾರಣ ಎಂದು ಶ್ರೀಕಂಠಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 7,91,095 ಲಕ್ಷ ಮನೆಗಳಲ್ಲಿದ್ದು, 6.20 ಲಕ್ಷ ಮನೆಗಳ ಸಮೀಕ್ಷೆಯನ್ನು ಮುಗಿಸಿದ್ದಾರೆ. 15,46,525 ಜನಸಂಖ್ಯೆಯಲ್ಲಿ ಒಟ್ಟು 12,41,429 ಗಣತಿ ಮಾಡಲಾಗಿದೆ, ಸರ್ವೇ ಆಗಿರುವ ಯುಎಚ್ಐಡಿ 5,25,339 ರಲ್ಲಿ ಒಟ್ಟು 1,97,738 ಯುಎಚ್ಐಡಿ ಕಾರ್ಯವು ಮುಕ್ತಾಯಗೊಂಡಿದೆ. ರಾಜ್ಯ ಸರಕಾರವು ನಿಗದಿಪಡಿಸಿರುವ ದಿನದೊಳಗೆ ಬಾಕಿ ಉಳಿದಿರುವ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡ ಗಣತಿದಾರರೊಬ್ಬರಿಗೆ ಹೃದಯಘಾತವಾಗಿದ್ದು, ಕೆಲವರಿಗೆ ನಾಯಿ ಹಾಗೂ ಹಾವು ಕಡಿತದಿಂದ ತೊಂದರೆಯುಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇದಕ್ಕಾಗಿ ಚಿಕಿತ್ಸೆಯನ್ನು ಪಡೆದಿದ್ದಲ್ಲಿ ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ಹಾಗೂ ಪರಿಹಾರ ಮಂಜೂರಾತಿಗಾಗಿ ಆಯೋಗದಿಂದ ಕ್ರಮವಹಿಸಲಾಗುವುದು ಎಂದು ಶ್ರೀಕಂಠಯ್ಯ ಭರವಸೆ ನೀಡಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. ಮಾತನಾಡಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಬಿಬಿಎಂಪಿ ದತ್ತಾಂಶ ಹಾಗೂ ನಗರ ಜಿಲ್ಲೆಯ ದತ್ತಾಂಶಗಳು ಸ್ಪಷ್ಟವಾಗಿ ದೊರಕದೆ ಇದ್ದ ಕಾರಣಗಳಿಂದ ಪ್ರಗತಿಯಲ್ಲಿ ಕುಂಠಿತವಾಗುತಿತ್ತು. ಕೆಲವು ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅನ್ಯ ಭಾಷಿಗರು ಹೆಚ್ಚಾಗಿದ್ದಾರೆ. ಭಾಷಾ ಸಂವಹನದಲ್ಲಿ ತೊಂದರೆ ಹಾಗೂ ಹಲವು ಮನೆಗಳು ಬೀಗ ಹಾಕಿದ್ದ ಕಾರಣ ಸಮೀಕ್ಷಾ ಕಾರ್ಯಕ್ಕೆ ತೊಡಕು ಉಂಟಾಯಿತು ಎಂದು ವಿವರಿಸಿದರು.
ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಬಿಬಿಎಂಪಿ ವ್ಯಾಪ್ತಿಯ 7 ಸಾವಿರ ಮನೆಗಳು ಸೇರ್ಪಡೆಗೊಂಡಿದ್ದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳ ಸಹಯೋಗದೊಂದಿಗೆ ಶೇ.81.25ರಷ್ಟು ಪ್ರಗತಿಯನ್ನು ಸಾಧಿಸಲು ಸಾಧ್ಯವಾಯಿತು. ಇತರೆ ಜಿಲ್ಲೆಗಳಿಗೆ ಹೊಲಿಸಿದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಬ್ಬ ಗಣತಿದಾರರು ತಲಾ ಸುಮಾರು 250ಕ್ಕಿಂತ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ಶಿಕ್ಷಕರನ್ನು ಅ.19ರಂದು ಗಣತಿ ಕಾರ್ಯದಿಂದ ಬಿಡುಗಡೆಗೊಳಿಸಲು ಅನುಮತಿ ನೀಡಬೇಕೆಂದು ಆಯೋಗದ ಸದಸ್ಯರನ್ನು ಕೋರಿದ ಜಿಲ್ಲಾಧಿಕಾರಿ, ಬಾಕಿ ಉಳಿದ ಗಣತಿ ಕಾರ್ಯವನ್ನು ಜಿಲ್ಲಾ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ ಪೂರ್ಣಗೊಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯತೀಶ್.ಆರ್., ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ವಿ.ಆರ್.ವಿಶ್ವನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಿರುಪಮಾ ಮೌಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







