ಕಾರ್ಮಿಕ ವಿರೋಧಿ ಕಾನೂನು ರದ್ದತಿಗೆ ಆಗ್ರಹಿಸಿ ಜು.9ಕ್ಕೆ ಅಖಿಲ ಭಾರತ ಮುಷ್ಕರ

ಬೆಂಗಳೂರು : ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜು.9ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕರ್ನಾಟಕದಲ್ಲೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ನಡೆಯಲಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ತಿಳಿಸಿದೆ.
ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ಶ್ರಮಜೀವಿಗಳ ಜೀವನ-ಜೀವನೋಪಾಯಗಳ ಮೇಲೆ ದಾಳಿ ಮಾಡುತ್ತಿದೆ. ಈ ಪರಿಸ್ಥಿತಿಗಳನ್ನು ಸುಧಾರಿಸಬೇಕಾದಂತಹ ಸರಕಾರ ತದ್ವಿರುದ್ಧವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಇವುಗಳನ್ನು ದುಡಿಯುವ ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದೆ. ಆ ಮೂಲಕ ಹಾಲಿ ಇರುವ ದುಡಿಯುವ ಜನರ ಹಕ್ಕುಗಳು ಕಸಿಯಲು ಹೊರಟಿದೆ ಎಂದು ತಿಳಿಸಿದರು.
ಕೆಲಸದ ಪರಿಸ್ಥಿತಿ, ಕಾರ್ಮಿಕರ ದುಡಿಯುವ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಸಂಘಟನೆಯ ಹಕ್ಕು, ಹೋರಾಟದ ಹಕ್ಕು ಮತ್ತು ಮುಷ್ಕರಗಳ ಹಕ್ಕುಗಳನ್ನು ದಮನಗೊಳಿಸುವ ನೀತಿಗಳು ಕಾಯ್ದೆಯಲ್ಲಿ ಒಳಗೊಂಡಿದೆ. ಕೇಂದ್ರ ಸರಕಾರ ಕಾರ್ಪೋರೇಟ್ ವ್ಯವಹಾರಗಳನ್ನು ನಡೆಸುವರಿಗೆ ಕಾಯ್ದೆಗಳನ್ನು ಉಲ್ಲಂಘನೆ ಮಾಡಲು ಮುಕ್ತ ಅವಕಾಶ ಕಲ್ಪಿಸುತ್ತಿದೆ. ಅದನ್ನು ವ್ಯಾಪಾರ ಸುಲಭಗೊಳಿಸುವುದಾಕ್ಕಾಗಿ ಎಂದು ಸರಕಾರ ನಾಚಿಕೆಯಿಲ್ಲದೆ ಹೇಳುತ್ತಿದೆ ಎಂದು ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ, ಆರೋಗ್ಯ ಇತರೆ ಕಲ್ಯಾಣ ಯೋಜನೆಗಳಿಗೆ ಬಜೆಟ್ ಅನುದಾನದಲ್ಲಿ ಕಡಿತ ಮಾಡಲಾಗಿದೆ. ರೈತರಿಗೆ ಸಿ2 ಪ್ಲಸ್ 50 ಆಧಾರಿತ ಕನಿಷ್ಠ ಬೆಂಬಲ ಬೆಲೆಯ ಜಾರಿಗೆ ಯಾವುದೇ ಸೂಚನೆಗಳನ್ನು ನೀಡದೇ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಗೆ ಕೇಂದ್ರ ಸರಕಾರ ಮುಂದಾಗಿದೆ. ಖಾಸಗಿಕರಣ ನೀತಿ ಮುಂದುವರಿಸಿರುವ ಕೇಂದ್ರ ಸರಕಾರ ರಾಷ್ಟ್ರೀಯ ನಗದಿಕರಣ ಪೈಪ್‍ಲೈನ್ ಯೋಜನೆ ಮುಂದುವರಿಸಿದೆ. ಬಾಹ್ಯಾಕಾಶ, ರಕ್ಷಣಾ ವಲಯ, ವಿದ್ಯುತ್ ವಲಯ ದೂರ ಸಂಪರ್ಕ ಬ್ಯಾಂಕ್ ಮತ್ತು ವಿಮೆ ಕ್ಷೇತ್ರದಲ್ಲಿ ಖಾಸಗಿಕರಣದ ಸುನಾಮಿಯನ್ನೇ ಸೃಷ್ಟಿಸಿದೆ ಎಂದರು.
ಈ ಎಲ್ಲ ಬೇಡಿಕೆ ಒತ್ತಾಯಕ್ಕಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ರಾಜ್ಯದಲ್ಲಿಯೂ ಮುಷ್ಕರವನ್ನು ಯಶಸ್ವಿಗೊಳಿಸಲು ಈಗಾಗಲೇ ರಾಜ್ಯ ಸಮಾವೇಶ ಜಿಲ್ಲಾ ಸಮಾವೇಶಗಳನ್ನು ಮಾಡಲಾಗಿದೆ. ಮುಷ್ಕರದ ನೋಟೀಸನ್ನು ನೀಡಲಾಗಿದೆ. ರಾಜ್ಯದಾದ್ಯಂತ ಕೈಗಾರಿಕಾ ಕಾರ್ಮಿಕರಲ್ಲಿ, ಸ್ಕೀಂ ಮತ್ತು ಗಾರ್ಮೆಂಟ್ಸ್ ಕಾರ್ಮಿಕರಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಸಮಿತಿ ಮುಖಂಡರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಐಯುಟಿಯುಸಿ ಕೆ.ವಿ.ಭಟ್, ಐಎನ್‍ಟಿಯುಸಿ ಶಾಮಣ್ಣ ರೆಡ್ಡಿ, ಸಿಐಟಿಯು ಮಹಾಂತೇಶ್, ಎಐಟಿಯುಸಿ ವಿಜಯ ಭಾಸ್ಕರ್, ಎಐಸಿಸಿಟಿಯು ಅಪ್ಪಣ್ಣ, ಎಸ್‍ಎಮ್‍ಎಸ್ ನಾಗನಾಥ್, ಟಿಯುಸಿಸಿ ಜಿ.ಆರ್.ಶಿವಶಂಕರ್, ಎನ್‍ಸಿಎಲ್ ರವಿ ಸೇರಿದಂತೆ ಹಲವು ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.







