ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್

ಬೆಂಗಳೂರು : ಶ್ರೀನಗರದಿಂದ ಶೇರ್- ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ಜನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಬಂದು ನಿಖಿಲ್ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದರು.
ʼಕಷ್ಟದ ಸಮಯದಲ್ಲಿ ನಿಖಿಲ್ ಅವರು ವೈಯಕ್ತಿಕವಾಗಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಅವರು ತುಂಬಾ ಗಂಭೀರವಾಗಿ ಪರಿಗಣಿಸಿದ್ದು ನಮಗೆ ತುಂಬಾ ಸಂತೋಷ ಉಂಟು ಮಾಡಿದೆ. ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ವೈಯಕ್ತಿಕ ಕಾಳಜಿ, ನೆರವು ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಂದ ದೊರೆತ ಸಹಾಯದಿಂದ ನಾವು ಸುರಕ್ಷಿತವಾಗಿ ನಮ್ಮ ನಮ್ಮ ಮನೆಗಳಿಗೆ ತಲುಪುತ್ತಿದ್ದೇವೆʼ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮದ ವಿದ್ಯಾರ್ಥಿ ಹರ್ಷಿತ್ ಅವರ ಪೋಷಕರು ಜಮ್ಮುವಿನಲ್ಲಿ ಸಿಲುಕಿರುವ ತಮ್ಮ ಪುತ್ರನನ್ನು ರಕ್ಷಣೆ ಮಾಡಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಕೂಡಲೇ ಈ ವಿಷಯವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರಕ್ಕೆ ಮನವಿ ಮಾಡಿದ್ದರು. ಎಲ್ಲಾ ವಿದ್ಯಾರ್ಥಿಗಳು ಈಗ ಮನೆಗೆ ತಲುಪಿದ್ದಾರೆ.





