133 ಪ್ರಭೇದದ ಪಕ್ಷಿಗಳ ತಾಣ ‘ಗ್ರೇಟರ್ ಹೆಸರಘಟ್’ ಈಗ ಸುರಕ್ಷಿತ: ಈಶ್ವರ್ ಖಂಡ್ರೆ

ಈಶ್ವರ್ ಖಂಡ್ರೆ
ಬೆಂಗಳೂರು : ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಅವಶ್ಯಕವಾಗಿರುವ ಹೆಸರಘಟ್ಟ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಿಸಲಾಗಿದ್ದು, ಈಗ ಇಡೀ ಪ್ರದೇಶ ಸುರಕ್ಷಿತವಾಗಿರುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣವಾದ ಈ ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಪ್ರದೇಶದ ಸಂರಕ್ಷಣೆಯೇ ನಮ್ಮ ಆದ್ಯತೆಯ ವಿಷಯವಾಗಿದೆ ಎಂದರು.
ಈ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ ಕೆರೆ ಸೇರಿದಂತೆ ಹಲವು ಕೆರೆಗಳಿದ್ದು ವಲಸೆ ಹಕ್ಕಿಗಳ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಬೆಂಗಳೂರು ನಗರದ ಜನತೆಯ ನೀರಿನ ಅವಶ್ಯಕತೆ ಪೂರೈಸುತ್ತಿದ್ದ ಹೆಸರಘಟ್ಟ ಕೆರೆ ಭವಿಷ್ಯದಲ್ಲೂ ರಾಜಧಾನಿಯ ಪ್ರಮುಖ ಜಲ ಮೂಲವಾಗಲಿದೆ ಎಂದು ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟರು.
ಬೆಂಗಳೂರು ನಗರ ಜಿಲ್ಲೆ ಯಲಹಂಕ ಉತ್ತರ ತಾಲೂಕಿನ ಒಟ್ಟು 5678.32 ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972ರ ಕಲಂ 36(ಎ) ಅನ್ವಯ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ನೈಸರ್ಗಿಕ ಹುಲ್ಲುಗಾವಲಿನ ರಕ್ಷಣೆ: ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂಬ ಘೋಷಣೆಯಿಂದ ಅಪರೂಪದ ನೈಸರ್ಗಿಕ ಹುಲ್ಲುಗಾವಲಿನ ಸಂರಕ್ಷಣೆ ಆಗಲಿದೆ ಎಂದ ಈಶ್ವರ್ ಖಂಡ್ರೆ, ಪಕ್ಷಿ ಮತ್ತು ಕೀಟಗಳ ಸಂರಕ್ಷಣೆಗೆ ಹುಲ್ಲುಗಾವಲಿನ ರಕ್ಷಣೆ ಅತ್ಯಗತ್ಯ. ಬೆಂಗಳೂರಿನೊಳಗೇ ಇರುವ ಇಂತಹ ಸುಂದರ ಹುಲ್ಲುಗಾವಲನ್ನು ರಕ್ಷಿಸಲು ಎಲ್ಲ ಒತ್ತಡಗಳನ್ನೂ ಮೀರಿ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಸ್ಥಳೀಯರಿಗೆ ತೊಡಕಿಲ್ಲ:
‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಣೆ ಮಾಡಿರುವುದರಿಂದ ಸ್ಥಳೀಯರಿಗೆ ಯಾವುದೇ ತೊಡಕಾಗುವುದಿಲ್ಲ. ಆದರೆ ಈ ಘೋಷಣೆ ಅತ್ಯಮೂಲ್ಯವಾದ ಭೂಮಿಯ ಒತ್ತುವರಿ ಮತ್ತು ಅಪರೂಪದ ಪಕ್ಷಿ, ಪ್ರಾಣಿಗಳ ಕಳ್ಳಬೇಟೆಯನ್ನು ನಿಯಂತ್ರಿಸುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.







