15 ದಿನಗಳಲ್ಲಿ ಹೊಸಕೆರೆಹಳ್ಳಿ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ: ತುಷಾರ್ ಗಿರಿನಾಥ್

ಬೆಂಗಳೂರು, ಅ.11: ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಶನಿವಾರ ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಹೊರ ವರ್ತುಲ ರಸ್ತೆಯ ಪಿ.ಇ.ಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್‍ನಲ್ಲಿ ಕೈಗೆತ್ತಿಕೊಳ್ಳಲಾದ ಮೇಲ್ಸೇತುವೆಯ ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೊಸಕೆರೆಹಳ್ಳಿ ಜಂಕ್ಷನ್‍ನಲ್ಲಿನ 500 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಒಂದು ಭಾಗದಲ್ಲಿ ಡೌನ್ ರ್ಯಾಂಪ್‍ಗೆ ವೈಟ್ ಮಿಕ್ಸ್ ಹಾಕಿದ್ದು, ಡಾಂಬರೀಕರಣ ಮಾಡುವ ಕೆಲಸ ಬಾಕಿಯಿದೆ. ಮತ್ತೊಂದು ಬದಿಯ ಡೌನ್ ರ್ಯಾಂಪ್‍ನಲ್ಲಿ ವೈಟ್ ಮಿಕ್ಸ್ ಹಾಕಿ ಡಾಂಬರೀಕರಣ ಮಾಡುವ ಕಾರ್ಯ ಬಾಕಿಯಿದೆ. ಮಳೆಯ ಕಾರಣದಿಂದ ಈ ಕಾರ್ಯಕ್ಕೆ ವಿಳಂಬವಾಗುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡು ಬಾಕಿ ಇರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾತನಾಡಿ, ಮೇಲ್ಸೇತುವೆಯ ಎರಡೂ ಬದಿಯ ಸರ್ವೀಸ್ ರಸ್ತೆಯಲ್ಲಿ ಹಾಳಾದ ಭಾಗಗಳನ್ನು ಕೂಡಲೇ ದುರಸ್ತಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ, ಸರ್ವೀಸ್ ರಸ್ತೆ ಹಾಗೂ ಮೇಲ್ಸೇತುವೆ ಕೆಳಭಾಗದಲ್ಲಿನ ಡೆಬ್ರೀಸ್ ಮತ್ತು ಇತರೆ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ವೇಳೆ ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್, ಸ್ವಯಂಪ್ರಭಾ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಸಂಬಂಧಪಟ್ಟ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.







