ಸೆ.15ಕ್ಕೆ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ : ಡಾ.ಎಚ್.ಸಿ.ಮಹದೇವಪ್ಪ

ಎಚ್.ಸಿ.ಮಹದೇವಪ್ಪ
ಬೆಂಗಳೂರು, ಸೆ.11 : ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ‘ನನ್ನ ಮತ ನನ್ನ ಹಕ್ಕು’ ಕಲ್ಪನೆಯಡಿ ಕಾರ್ಯಕ್ರಮವು ರೂಪುಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಪ್ರಜಾಪ್ರಭುತ್ವವು ಗಟ್ಟಿಯಾಗುವುದು ಯೋಚಿತ ಮತದಾನದಿಂದ ಎಂಬ ಪ್ರಜ್ಞೆಯು ಸಮಾಜಕ್ಕೆ ಅರಿವಿನ ರೂಪದಲ್ಲಿ ಇರಬೇಕಾದ ಸಂಗತಿಯಾಗಿದೆ. ಹೀಗಾಗಿಯೇ ನಮ್ಮ ಅಸ್ತಿತ್ವದ ಮೌಲ್ಯವನ್ನು ಸೂಚಿಸುವ ಮತದ ಹಕ್ಕಿನ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಮತ್ತು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನವಾಗಿ ನೀಡಿದ ಮತದಾನದ ಅವಕಾಶವನ್ನು ತಿಳಿಸುವ, ಮತದಾನದ ಹಕ್ಕು ನಿರಾಕರಣೆ ಆಗದ ಹಾಗೆ ಅದನ್ನು ಚಲಾಯಿಸುವ ಕುರಿತಂತೆ ಜಾಗೃತಿಯು ಈ ದಿನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ದಿನಾಚರಣೆಯಂದು ನನ್ನ ಮತ - ನನ್ನ ಹಕ್ಕು ಅಭಿಯಾನದಡಿಯಲ್ಲಿ ಸೈಕಲ್ ಜಾಥಾ, ಬೈಕ್ ಜಾಥಾ, ಚಿತ್ರಕಲೆ ಸ್ಪರ್ಧೆ ಮತ್ತು ಮಕ್ಕಳ ಚರ್ಚಾ ಸ್ಪರ್ಧೆಯು ಇರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು ಮತ್ತು ಮಕ್ಕಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಭುತ್ವ ದಿನದಂದು ಎಲ್ಲರೂ ಮತದಾನದ ಹಕ್ಕಿನ ಕುರಿತು ಹೆಚ್ಚು ವಿಚಾರಗಳನ್ನು ತಿಳಿಯುವ ಮತ್ತು ತಿಳಿಸುವ ಕೆಲಸವನ್ನು ಮಾಡಬೇಕು. ಮತದಾರರ ರೂಪಿಸಬೇಕಾದ ಪ್ರಜಾಪ್ರಭುತ್ವದ ಬಗ್ಗೆ ಚರ್ಚಿಸಬೇಕು ಎಂದು ಮಹದೇವಪ್ಪ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಇದೇ ಸೆಪ್ಟೆಂಬರ್ 15 ನೇ ತಾರೀಖಿನಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನನ್ನ ಮತ ನನ್ನ ಹಕ್ಕು ಕಲ್ಪನೆಯಡಿ ಕಾರ್ಯಕ್ರಮವು ರೂಪುಗೊಳ್ಳಲಿದೆ.
— Dr H C Mahadevappa(Buddha Basava Ambedkar Parivar) (@CMahadevappa) September 11, 2025
ಪ್ರಜಾಪ್ರಭುತ್ವವು ಗಟ್ಟಿಯಾಗುವುದು ಯೋಚಿತ ಮತದಾನದಿಂದ ಎಂಬ ಪ್ರಜ್ಞೆಯು ಸಮಾಜಕ್ಕೆ ಅರಿವಿನ ರೂಪದಲ್ಲಿ ಇರಬೇಕಾದ ಸಂಗತಿಯಾಗಿದೆ.… pic.twitter.com/1nyA9ELokR







