ಬಝ್ಮೆ ನಿಸ್ವಾನ್ ಟ್ರಸ್ಟ್ ವತಿಯಿಂದ 1.70 ಕೋಟಿ ರೂ. ವಿದ್ಯಾರ್ಥಿ ವೇತನ ವಿತರಣೆ

ಬೆಂಗಳೂರು: ಪಿಯುಸಿ, ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಸಹಕಾರಿಯಾಗುವಂತೆ ಬಝ್ಮೆ ನಿಸ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 4500 ಬಡ ವಿದ್ಯಾರ್ಥಿನಿಯರಿಗೆ 1.70 ಕೋಟಿ ರೂ.ಗಳ ವಿದ್ಯಾರ್ಥಿ ವೇತನವನ್ನು ಟ್ರಸ್ಟ್ ನ ಅಧ್ಯಕ್ಷೆ ಹುಸ್ನಾ ಶರೀಫ್ ವಿತರಣೆ ಮಾಡಿದರು.
ಗುರುವಾರ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲು ಆನ್‍ಲೈನ್ ಮೂಲಕ 6022 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 4500 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ, 1.70 ಕೋಟಿ ರೂ.ಗಳ ವಿದ್ಯಾರ್ಥಿವೇತನ ವಿತರಿಸಲಾಗಿದೆ ಎಂದರು.
ಪಿಯುಸಿಯ 2093, ಡಿಪ್ಲೊಮಾ ಕೋರ್ಸ್ ಗಳ 72, ಪದವಿ ತರಗತಿಗಳಿಗೆ 2115, ಸ್ನಾತಕೋತ್ತರ ಪದವಿಗಳಿಗೆ 220 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ. 1971ರಲ್ಲಿ ಆರಂಭವಾದ ನಮ್ಮ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಮಾಡಲಾಗುತ್ತಿದೆ ಎಂದು ಹುಸ್ನಾ ಶರೀಫ್ ಹೇಳಿದರು.
ಕಾರ್ಯಕ್ರಮದಲ್ಲಿ ಫಿರೋಝ್ ಎಸ್ಟೇಟ್ ಮಾಲಕ ಫಿರೋಝ್ ಅಬ್ದುಲ್ಲಾ, ಸಿಗ್ಮಾ ಫೌಂಡೇಶನ್ ಮುಖ್ಯಸ್ಥ ಅಮೀನ್ ಮುದಸ್ಸರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







