ಫೆ.2ಕ್ಕೆ ‘ಮನರೇಗಾ’ ಮರು ಜಾರಿಗೆ ಆಗ್ರಹಿಸಿ ‘ಕಾರ್ಮಿಕರ ಮಹಾಪಂಚಾಯತ್’

ಸಾಂದರ್ಭಿಕ ಚಿತ್ರ |PC : freepik
ಬೆಂಗಳೂರು : ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರಿಂದ ಉದ್ಯೋಗದ ಹಕ್ಕನ್ನು ಕಸಿದಿರುವ ವಿಬಿ-ಜಿ ರಾಮ್-ಜಿ ಕಾಯ್ದೆಯನ್ನು ವಿರೋಧಿಸಿ, ಮನರೇಗಾ ಮುಂದುವರೆಸಬೇಕು ಮತ್ತು ಬಲಪಡಿಸಬೇಕೆಂದು ಆಗ್ರಹಿಸಿ ‘ಮನರೇಗಾ ರಕ್ಷಣಾ ಒಕ್ಕೂಟ’ದ ವತಿಯಿಂದ ಫೆ.2ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಕಾರ್ಮಿಕರ ಮಹಾಪಂಚಾಯತ್ ಅನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಒಕ್ಕೂಟದ ಪದಾಧಿಕಾರಿಗಳಾದ ಶಾರದಾ ಗೋಪಾಲ್, ಗಾಯತ್ರಿ ವಿ., ಶಂಸುದ್ದೀನ್ ಬಳಿಗಾರ್, ಪುಟ್ಟಮಾಧು, ವತ್ಸಲ ಆನೇಕಲ್, ನವೀನ್ ಎನ್. ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಒಕ್ಕೂಟ ಸರಕಾರವು ಗ್ರಾಮೀಣ ಜನರಿಗೆ ತಮ್ಮ ಊರಲ್ಲಿಯೇ ಕೆಲಸ ದೊರಕಿಸಿಕೊಡುತ್ತಿದ್ದ, ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಕೊಡುತ್ತಿದ್ದ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ' ಯೋಜನೆಯನ್ನು ಕಿತ್ತೊಗೆದು, ಹೊಸ ವಿಬಿ-ಜಿರಾಮ್-ಜಿ ಎಂಬ ಕಾನೂನನ್ನು ತಂದಿದೆ ಎಂದಿದ್ದಾರೆ.
ಎಲ್ಲೆಡೆ 125 ದಿನಗಳ ಕೆಲಸ ಎಂದು ಪ್ರಚಾರ ಪಡೆಯುತ್ತಿರುವ ಈ ಹೊಸ ಕಾನೂನು, ಜನರಿಗೆ ಉದ್ಯೋಗವನ್ನು ಗೌರವದ ಹಕ್ಕಾಗಿ ಇಟ್ಟಿಲ್ಲ. ಬದಲಿಗೆ ಒಕ್ಕೂಟ ಸರಕಾರ ನೀಡುವ ಭಿಕ್ಷೆಯಾಗಿ ಮಾರ್ಪಡಿಸಿದೆ. ಯಾವ ಪಂಚಾಯತಿಯಲ್ಲಿ ಕೆಲಸ ಸಿಗುತ್ತದೆ ಎಂಬ ಖಾತರಿ ಇಲ್ಲ. ಹಳ್ಳಿ ಜನರೇ ನಿರ್ಧರಿಸಿ ಸ್ಥಳೀಯ ಸಂಪನ್ಮೂಲಗಳನ್ನು ಹೆಚ್ಚಿಸುವಂಥ ಕೆಲಸಗಳಲ್ಲ. ವರ್ಷದ ಎಲ್ಲ ದಿನಗಳಲ್ಲೂ ಕೆಲಸವಿಲ್ಲ, ಅಂತಹ ಕಾನೂನು ಇದು. ತನ್ನ ಮೇಲಿನ ಹೊರೆಯ ಅರ್ಧ ಪಾಲನ್ನು ರಾಜ್ಯಗಳ ಮೇಲೆ ದಾಟಿಸಿರುವುದರಿಂದ ರಾಜ್ಯಗಳೂ ಜನರಿಗೆ ಕೆಲಸ ಕೊಡಲು ಉತ್ಸಾಹ ತೋರಲಿಕ್ಕಿಲ್ಲ ಎಂದು ಹೋರಾಟಗಾರರು ವಿವರಿಸಿದ್ದಾರೆ.
ಜನರಿಗೆ ತಮ್ಮ ಊರಲ್ಲಿಯೇ ಕೆಲಸ ಸಿಗಬೇಕೆಂದರೆ, ಗ್ರಾಮಗಳ ಸಂಪನ್ಮೂಲ ವೃದ್ಧಿಯಾಗಬೇಕೆಂದರೆ ಹೊಸ ಕಾನೂನನ್ನು ಹಿಂಪಡೆದು ಸರಕಾರವು ಹಳೆಯ ಕಾನೂನನ್ನೇ ಮರು ಸ್ಥಾಪಿಸುವಂತಾಗಬೇಕು. ಅದು ಸುಲಭದ ಮಾತಲ್ಲ. ಜನರಿಂದ ತೀವ್ರ ಹೋರಾಟಗಳಾಗಬೇಕು. ‘ಮನರೇಗಾ ರಕ್ಷಣಾ ಒಕ್ಕೂಟ'ವು ರಾಜ್ಯಾದ್ಯಂತದಿಂದ ಕೂಲಿಕಾರರನ್ನು, ಸಣ್ಣ ರೈತರನ್ನು ಒಟ್ಟುಗೂಡಿಸಿ ಮೊದಲಿನ ಮನರೇಗಾ ಬೇಕೆಂಬ ಅವರ ಬೇಡಿಕೆ ದಿಲ್ಲಿಯವರಿಗೂ, ಅಧಿಕಾರಸ್ಥರಿಗೂ ಕೇಳುವಂತೆ ಮಾಡಲು ಪ್ರಯತ್ನಗಳನ್ನು ನಡೆಸಿದೆ. ಅಂತಹ ಪ್ರಯತ್ನಗಳಲ್ಲೊಂದು ಈ ಮಹಾ ಪಂಚಾಯತ್, ಕೂಲಿಕಾರ್ಮಿಕರು, ಮಹಿಳಾ ಕಾರ್ಮಿಕರು, ದಲಿತ ಕಾರ್ಮಿಕರು, ಸಣ್ಣ ರೈತರು, ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದು ಮಾತಾಡಲಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.







