ಬೆಂಗಳೂರು ನಗರದಲ್ಲಿ 201 ಪ್ರವಾಹ ಪೀಡಿತ ಸ್ಥಳಗಳ ಗುರುತು : ಶಾಲಿನಿ ರಜನೀಶ್

ಡಾ.ಶಾಲಿನಿ ರಜನೀಶ್
ಬೆಂಗಳೂರು : ಬೆಂಗಳೂರು ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ನಗರಾದ್ಯಂತ 201 ಪ್ರವಾಹ ಪೀಡಿತ ಸ್ಥಳಗಳನ್ನು ಗುರುತಿಸಿದ್ದು, ಈ ಬಗ್ಗೆ ಸಾಕಷ್ಟು ಮುನ್ನಚ್ಚರಿಕೆ ವಹಿಸಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಶುಕ್ರವಾರ ನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ, ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ, ಜೀವರಕ್ಷಾ ಟ್ರಸ್ಟ್ ಹಾಗೂ ಭಾರತೀಯ ರೈಲ್ವೇಸ್ ಇನ್ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಸಹಯೋಗದಲ್ಲಿ ಐಐಎಸ್ಸಿನಲ್ಲಿ ಆಯೋಜಿಸಲಾಗಿದ್ದ ‘ಸಿಬಿಡಿಎಮ್ ಇಂಡಿಯಾ-2025 ವಿಪತ್ತು ಆರೋಗ್ಯ ಸಿದ್ಧತೆ’ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಮನೆ ಅಥವಾ ಕಟ್ಟಡಗಳನ್ನು ನಿರ್ಮಿಸಿರುವ ಈ ಸ್ಥಳಗಳಲ್ಲಿ ಹೆಚ್ಚಿನವು ಸರಕಾರಿ ಅಧಿಕಾರಿಗಳಿಂದ ಸರಿಯಾದ ಅನುಮೋದನೆಯನ್ನೇ ಪಡೆದಿಲ್ಲ. ಇದರಿಂದ ಅತಿಕ್ರಮಣದ ತೆರವು ಅಥವಾ ಅವುಗಳನ್ನು ಪುನರ್ ವಸತಿ ಮಾಡುವುದು ಸರಕಾರಕ್ಕೆ ದೊಡ್ಡ ಸವಾಲಾಗಿದೆ. ಸರಕಾರ ಯಾವುದೇ ರೀತಿಯ ಕ್ರಮಕ್ಕೆ ಮುಂದಾದರೆ ಅದು ಜನವಿರೋಧಿಯಾಗುತ್ತದೆ. ಆದುದರಿಂದ ಸಮುದಾಯದ ಸಹಕಾರವೇ ಏಕೈಕ ಪರಿಹಾರ. ಹೀಗಾಗಿ ಜನರೇ ಈ ವಿಕೋಪಗಳ ಬಗ್ಗೆ ಜಾಗೃತರಾಗಿ ಅತಿಕ್ರಮಣ ಆಗದಂತೆ ಸ್ವಯಂ ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಹವಾಮಾನ ಬದಲಾವಣೆ ನಮ್ಮ ಮುಂದಿರುವ ಸವಾಲು ಮತ್ತು ಕಳವಳಕಾರಿ ವಿಷಯ. 3080 ಸಾವುಗಳು ವಿಕೋಪದಿಂದ ಸಂಭವಿಸಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಹೆಚ್ಚಾಗಿದೆ. ಮಾನವ ನಿರ್ಮಿತ ವಿಪತ್ತುಗಳು ಗಮನಾರ್ಹವಾಗಿ ಹೆಚ್ಚುತ್ತಿವೆ. ವಿಪತ್ತು ನಿರ್ವಹಣೆಗೆ ಸಮುದಾಯಗಳ ಸಂಪೂರ್ಣ ಸಹಕಾರ ಇಲ್ಲದೇ ಹೋದಲ್ಲಿ, ವಿಪತ್ತು ನಿರ್ವಹಿಸಲು ಎಷ್ಟೇ ಕಾನೂನು ರೂಪಿಸಿದರೂ ವ್ಯರ್ಥ. ಅಂಕೋಲಾದಲ್ಲಿ ನಡೆದ ಭೂಕುಸಿತದ ಪ್ರಾಕೃತಿಕ ವಿಕೋಪದಿಂದ ಹಲವು ಕುಟುಂಬಗಳು ಪ್ರಾಣ ಕಳೆದುಕೊಂಡಿದ್ದಾರೆ ಅವರು ಬೇಸರ ವ್ಯಕ್ತಪಡಿಸಿದರು.
ಭೂ ಕುಸಿತದಂತಹ ಪೀಡಿತ ಪ್ರದೇಶಗಳಲ್ಲಿ ಮನೆ ಅಥವಾ ಅಂಗಡಿ ನಿರ್ಮಿಸದೇ ಇದ್ದಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ. ಇಂತಹ ದುರಂತಗಳನ್ನು ತಪ್ಪಿಸಲು ಸೂಕ್ಷ್ಮ ಪ್ರದೇಶಗಳಿಂದ ದೂರವಿರುವ ನಿರ್ಧಾರವನ್ನು ಸಮುದಾಯಗಳು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡು ಮುಂದಾಗುವ ಇಂತಹ ಅನಾಹುತ ತಪ್ಪಿಸಬೇಕು. ಇದಕ್ಕೆ ಸಮುದಾಯಗಳ ಬೆಂಬಲ ಬೇಕು. ಪ್ರವಾಹ ಹಾಗೂ ಬರಗಾಲದಂತಹ ತುರ್ತು ಸಂದರ್ಭದಲ್ಲಿ ರೈತರು ಹಾಗೂ ಸಮುದಾಯಗಳನ್ನು ಎಚ್ಚರಗೊಳಿಸಲು ವಿಪತ್ತು ನಿರ್ವಹಣಾ ಕೋಶದಲ್ಲಿ 70 ಲಕ್ಷಕ್ಕೂ ಅಧಿಕ ರೈತರ ಮೊಬೈಲ್ ಸಂಖ್ಯೆಯ ನೋಂದಣಿಯಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ಅವರೆಲ್ಲರಿಗೂ ಎಚ್ಚರಿಕೆ ನೀಡಬಹುದಾಗಿದೆ ಎಂದು ಶಾಲಿನಿ ರಜನೀಶ್ ತಿಳಿಸಿದರು.
ಜೀವರಕ್ಷಣೆ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಎ.ಬಾಲಸುಬ್ರಹ್ಮಣ್ಯ, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ತಾಂತ್ರಿಕ ನಿರ್ದೇಶಕ ಡಾ.ರಾಮ್ ಕೆ.ನಾಯರ್, ಉಪಕುಲಪತಿ ಡಾ.ಬಿ.ಸಿ.ಭಗವಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.







