2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ | 'ಪಿಂಕಿ ಎಲ್ಲಿ’ ಸಿನೆಮಾಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಬೆಂಗಳೂರು : 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಪಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ’ ಸಿನೆಮಾವು -ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ತಲಾ ಒಂದು ಲಕ್ಷ ರೂ. ನಗದು ಹಾಗೂ 50ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ವರ್ಣಪಟಲ, 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಹರಿವ ನದಿಗೆ ಮೈಯೆಲ್ಲಾ ಕಾಲು, ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ ಪ್ರಶಸ್ತಿಯನ್ನು ಗಿಳಿಯು ಪಂಜರದೊಳಿಲ್ಲ ಹಾಗೂ ಈ ಮಣ್ಣು ಚಿತ್ರಗಳು ಆಯ್ಕೆಯಾಗಿವೆ.
ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನೆಮಾ ಪ್ರಶಸ್ತಿಯನ್ನು ಫೋರ್ ವಾಲ್ಸ್, ‘ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪದಕ, ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ನೀಲಿಹಕ್ಕಿ, ತುಳು ಭಾಷೆಯ ‘ಜೀಟಿಗೆ’ ಚಿತ್ರವು ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಸಿನೆಮಾ ಪ್ರಶಸ್ತಿ ಪಡೆದುಕೊಂಡಿದೆ.
ಅತ್ಯುತ್ತಮ ನಟ ಸುಬ್ಬಯ್ಯ ನಾಯ್ಡು ಪ್ರಶಸ್ತಿಗೆ ನಟ ಪ್ರಜ್ವಲ್ ದೇವರಾಜ್, ಅತ್ಯುತ್ತಮ ನಟಿ ಪ್ರಶಸ್ತಿಗೆ ಅಕ್ಷತಾ ಪಾಂಡವಪುರ, ಹಾಗೂ ರಮೇಶ್ ಪಂಡಿತ್ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಂತಪುರಾಣ ಸಿನೆಮಾದಲ್ಲಿನ ನಟನೆಗಾಗಿ ಮಂಜುಳಮ್ಮ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಶಶಿಕಾಂತ್ ಶೆಟ್ಟಿ ನಿರ್ದೇಶನದ ರಾಂಚಿ ಸಿನೆಮಾ, ಅತ್ಯುತ್ತಮ ಚಿತ್ರಕತೆ ಚಾಂದಿನಿ ಬಾರ್, ಅತ್ಯುತ್ತಮ ಸಂಭಾಷಣೆ ಹೂವಿನ ಹಾರ, ಅತ್ಯುತ್ತಮ ಛಾಯಾಗ್ರಹಣ ತಲೆದಂಡ, ಅತ್ಯುತ್ತಮ ಸಂಗೀತ ನಿರ್ದೇಶನ ಮಾಲ್ಗುಡಿ ಡೇಸ್, ಅತ್ಯುತ್ತಮ ಸಂಕಲನ ಆಕ್ಟ್1978, ಅತ್ಯುತ್ತಮ ಬಾಲ ನಟಪ್ರಶಸ್ತಿಯನ್ನು ಮಾಸ್ಟರ್ ಆಹಿಲ್ ಅನ್ಸಾರಿ ಅವರು ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನು ಬೇಬಿ ಹಿತೃಷಿ ಪೂಜಾರ್, ಅತ್ಯುತ್ತಮ ಕಲಾ ನಿರ್ದೇಶನ ಪ್ರಶಸ್ತಿಯನ್ನು ಬಿಚ್ಚಗತ್ತಿ ಚಿತ್ರ, ಅತ್ಯುತ್ತಮ ಗೀತ ರಚನೆ ಪ್ರಶಸ್ತಿಯನ್ನು ಗಾರ್ಗಿ ಕಾರೆಹಕ್ಲು ಹಾಗೂ ಸಚೀನ್ ಶೆಟ್ಟಿ ಕುಂಬ್ಳೇ ಭಾಜನರಾಗಿದ್ದಾರೆ.
ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಅನಿರುದ್ಧ ಶಾಸ್ತ್ರಿ, ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ಅರುಂದತಿ ವಶಿಷ್ಟ, ತೀರ್ಪುಗಾರರ ವಿಶೇಷ ಪ್ರಶಸ್ತಿ ನಟನೆಗಾಗಿ ಸಂಚಾರಿ ವಿಜಯ್(ಮರಣೋತ್ತರ), ವಸ್ತ್ರ ವಿನ್ಯಾಸಕ್ಕಾಗಿ ಶ್ರೀವಲ್ಲಿ, ಪ್ರಸಾದನಕ್ಕಾಗಿ ರಮೇಶ್ ಬಾಬು, ಶಬ್ಧಗ್ರಹಣಕ್ಕಾಗಿ ವಿ.ಜಿ.ರಾಜನ್ ಹಾಗೂ ವಿಶೇಷಚೇತನ ನಟ ಪ್ರಶಸ್ತಿಗೆ ವಿಶ್ವಾಸ್ ಕೆ.ಎಸ್, ಅತ್ಯುತ್ತಮ ನಿರ್ಮಾಣ ಪ್ರಶಸ್ತಿಗೆ ಚಂಪಕದಾಮ ಬಾಬು ಆಯ್ಕೆಯಾಗಿದ್ದಾರೆ.







