ಆ.25ಕ್ಕೆ ಬಿಡದಿ ರೈತರ ಹೋರಾಟ ಬೆಂಬಲಿಸಿ ‘ವಿಧಾನಸೌಧ ಚಲೋ’

ಸಾಂದರ್ಭಿಕ ಚಿತ್ರ
ಬೆಂಗಳೂರು : ಹೈಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ನೇತೃತ್ವದ ಬಿಡದಿ ಟೌನ್ಶಿಪ್ ಪರಾಮರ್ಶೆ ಸಮಿತಿ ರಚನೆ ಆದೇಶ ಹೊರಡಿಸುವ ಕುರಿತು ರಾಜ್ಯ ಸರಕಾರ ಅನುಸರಿಸುತ್ತಿರುವ ಅನಗತ್ಯ ಹಾಗೂ ದುರುದ್ದೇಶದ ವಿಳಂಬ ನೀತಿ ಖಂಡಿಸಿ ಹಾಗೂ ರೈತರ ಹೋರಾಟ ಬೆಂಬಲಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಬೈರಮಂಗಲ-ಕಂಚುಗಾರನಹಳ್ಳಿ ಪಂಚಾಯತಿ ವ್ಯಾಪ್ತಿಯ ಭೂ ಹಿತರಕ್ಷಣಾ ಸಂಘದ ವತಿಯಿಂದ ಆ.25ರಂದು ‘ವಿಧಾನಸೌಧ ಚಲೋ' ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಸಂಯುಕ್ತ ಹೋರಾಟ ಕರ್ನಾಟಕದ ಪದಾಧಿಕಾರಿ ಬಡಗಲಪುರ ನಾಗೇಂದ್ರ, ಯಾವುದೇ ಕಾನೂನು ತಳಹದಿ ಇಲ್ಲದ ರೈತ ವಿರೋಧಿ ಹಾಗೂ ಪರಿಸರ ವಿರೋಧಿ ಬಿಡದಿ ಟೌನ್ಶಿಪ್ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಹೋರಾಟ ಒಂದೂವರೆ ವರ್ಷಗಳಿಂದ ನಡೆಯುತ್ತಿದ್ದರೂ, ಕಾಂಗ್ರೆಸ್ ನೇತೃತ್ವದ ಸರಕಾರ ಒಂದು ಬಾರಿಯೂ ರೈತರ ಜೊತೆ ಮಾತುಕತೆ ನಡೆಸಿಲ್ಲ. ಬದಲಾಗಿ ಪಕ್ಷ ರಾಜಕೀಯವನ್ನು ಮುಂದುಮಾಡುತ್ತಾ ಹಲವಾರು ರೀತಿಯ ಅಪಪ್ರಚಾರದಲ್ಲಿ ತೊಡಗಿದೆ. ಇದೇ ರೀತಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕಣ್ಣಾಮುಚ್ಚಾಲೆ ನಾಟಕ ಆಡುತ್ತಾ ಪಕ್ಷ ರಾಜಕೀಯದ ಹೆಸರಿನಲ್ಲಿ ರೈತರಲ್ಲಿ ಒಡಕು ಉಂಟು ಮಾಡಿ ಕಾಂಗ್ರೆಸ್ ಸರಕಾರದ ರಿಯಲ್ ಎಸ್ಟೇಟ್ ದುರುದ್ದೇಶಕ್ಕೆ ಪರೋಕ್ಷವಾಗಿ ಸಹಕರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೂರು ಪಕ್ಷಗಳು ಬಿಡದಿ ಟೌನ್ಶಿಪ್ ಯೋಜನೆ ಕುರಿತ ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿವೆಯೇ ಹೊರತು, ರೈತರ ಭೂಮಿ ಉಳಿಸಲು ಯಾವುದೇ ಅರ್ಥಪೂರ್ಣ ಹೋರಾಟವನ್ನು ನಡೆಸುತ್ತಿಲ್ಲ. ಶಾಸನಸಭೆಯ ಕಲಾಪಗಳಲ್ಲೂ ಪರಿಣಾಮಕಾರಿ ಹೋರಾಟ ನಡೆಸದೇ ರಿಯಲ್ ಎಸ್ಟೇಟ್ ಕೈಗೊಂಬೆಯಂತೆ ವರ್ತಿಸುತ್ತಿವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.






