25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ರೂ.ನಷ್ಟ : ದೇವೇಂದರ ಶರ್ಮಾ

ಬೆಂಗಳೂರು : ವರದಿಗಳ ಪ್ರಕಾರ 25 ವರ್ಷಗಳ (2000-2025) ಅವಧಿಯಲ್ಲಿ ದೇಶದ ರೈತರಿಗೆ 111 ಲಕ್ಷ ಕೋಟಿ ರೂ.ನಷ್ಟವಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‍ನ ಕೃಷಿ ಸುಧಾರಣಾ ಸಮಿತಿ ಅಧ್ಯಕ್ಷ ದೇವೇಂದರ ಶರ್ಮಾ ಮಾಹಿತಿ ನೀಡಿದ್ದಾರೆ.
ಸೋಮವಾರ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ರೈತರ ಆತ್ಮಹತ್ಯೆಗಳ ತಡೆ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2000 ರಿಂದ 2016ರ ಅವಧಿಯಲ್ಲಿ 45 ಲಕ್ಷ ಕೋಟಿ ರೂ. ರೈತರಿಗೆ ನಷ್ಟವಾಗಿತ್ತು. ನಂತರ ನಷ್ಟದ ಮೊತ್ತ ಮತ್ತಷ್ಟು ಹೆಚ್ಚಾಯಿತು. ಮಾರುಕಟ್ಟೆ ಏರಿಳಿತ, ಬೆಳೆ ನಷ್ಟ ಸೇರಿದಂತೆ ಅನೇಕ ಕಾರಣಗಳಿರಬಹುದು. ಈ ವಿಷಯದ ಬಗ್ಗೆ ಕೃಷಿ ವಿಶ್ವ ವಿದ್ಯಾನಿಲಯಗಳಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ, ಸಂಸತ್‍ನಲ್ಲೂ ಚರ್ಚೆಯಾಗಲಿಲ್ಲ ಎಂದರು.
ವರ್ಷದಿಂದ ವರ್ಷಕ್ಕೆ ಆದಾಯ ಕುಸಿಯುತ್ತಿದ್ದರೂ ವಿಶ್ವದಲ್ಲಿ ಭಾರತ ದೇಶದ ರೈತರು ಮಾತ್ರ ಬೆಳೆ ಉತ್ಪಾದನೆ ನಿಲ್ಲಿಸಿಲ್ಲ. ಬೆಳೆಗಳ ಬೆಲೆ ಕುಸಿತಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಬೇಕು. ರೈತರ ಕಲ್ಯಾಣಕ್ಕೆ ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ ಅನ್ನದಾತರ ಆತ್ಮಹತ್ಯೆ ನಿಂತಿಲ್ಲ. ದೇಶದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಪಂಜಾಬ್‍ನಲ್ಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೇವೇಂದರ ಶರ್ಮಾ ವಿವರಿಸಿದರು.
ಈ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಭಿವೃದ್ಧಿ ಹೊಂದಿರುವ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್‍ನಲ್ಲಿಯೂ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮೆರಿಕದಲ್ಲಿ 8 ಸಾವಿರ ಹತ್ತಿ ಬೆಳೆಗಾರರಿಗೆ ಸರಕಾರ 1 ಲಕ್ಷ ಡಾಲರ್ ಸಬ್ಸಿಡಿ ನೀಡಿದೆ. ಆದರೆ ಭಾರತದಲ್ಲಿ 98 ಲಕ್ಷ ಹತ್ತಿ ಬೆಳೆಗಾರರಿಗೆ 27 ಸಾವಿರ ಡಾಲರ್ ಸಬ್ಸಿಡಿ ದೊರೆತಿದೆ. ಸಬ್ಸಿಡಿಯಿಂದಲೇ ರೈತರು ಉಳಿದುಕೊಂಡಿದ್ದಾರೆ. ಚೀನಾ ತನ್ನ ರೈತರಿಗೆ ಹೆಚ್ಚು ಸಬ್ಸಿಡಿ ನೀಡುತ್ತಿದೆ ಎಂದು ಅವರು ಹೇಳಿದರು.
ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ ಶೇ.3.4 ಅನುದಾನ ನೀಡಲಾಗಿದೆ. ಕಳೆದ ವರ್ಷ ಶೇ.3.15 ಇತ್ತು. ಎಲ್ಲ ಕ್ಷೇತ್ರಕ್ಕೂ ಸಮಾನ ಹಂಚಿಕೆ ಮಾಡಬೇಕೆಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ. ಕರ್ನಾಟಕದ ನೀತಿ ನಿರೂಪಕರು ಸಹ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು. ಸಾಲ ಪಡೆಯುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಿಬಿಲ್ ಸ್ಕೋರ್ ಪರಿಗಣಿಸಬಾರದು, ವರ್ಷದ 12 ತಿಂಗಳೂ ಖರೀದಿ ಕೇಂದ್ರಗಳು ತೆರೆದಿರಬೇಕು ಮತ್ತು ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯಲು `ಋಣ ಮುಕ್ತ ಕಾಯ್ದೆ' ಜಾರಿ ತರಬೇಕು ಎಂದು ದೇವೇಂದರ ಶರ್ಮಾ ಒತ್ತಾಯಿಸಿದರು.
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿ, ರೈತರ ಆತ್ಮಹತ್ಯೆಗೆ ಹಲವು ಕಾರಣಗಳಿವೆ. ಸರಕಾರಕ್ಕೆ ಆದಾಯ ಬರಲಿದೆ ಎಂಬ ಕಾರಣಕ್ಕೆ ಮದ್ಯ ಮಾರಾಟಕ್ಕೆ ಉತ್ತೇಜನ ನೀಡಬಾರದು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಬಜೆಟ್ ಕುರಿತ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲು ರೈತ ನಾಯಕರು, ತಜ್ಞರು ತಂಡವನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ರೈತ ನಾಯಕ ಕೆ.ಟಿ.ಗಂಗಾಧರ್, ಭಾರತೀಯ ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆ ಡಾ.ಅಶೋಕ್ ದಳವಾಯಿ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ, ರಾಜ್ಯ ಕೃಷಿ ಮಾರಾಟ ಮಂಡಳಿಯ ಬಸವರಾಜ ಹುಂಬರವಾಡಿ, ನಿವೃತ್ತ ಕೃಷಿ ಅಧಿಕರಿ ಬಿ.ಎಚ್.ಪಿಂಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







