ಡಿ.28ರಂದು ‘ಜನರಾಜ್ಯೋತ್ಸವ’ ಕಾರ್ಯಕ್ರಮ ನಡೆಸಲು ಕನ್ನಡಪರ ಹೋರಾಟಗಾರರ ನಿರ್ಣಯ

ಬೆಂಗಳೂರು : ಕನ್ನಡದ ನೆಲ, ಜಲ, ರಾಜ್ಯಭಾಷೆ ಕನ್ನಡದ ಗೌರವಕ್ಕಾಗಿ ನಡೆದ ದೀರ್ಘ ಚಳವಳಿಗಳ ಸಂಕೇತವಾಗಿ ಎಲ್ಲ ಕನ್ನಡಪರ ಸಂಘಟನೆಗಳು, ಸಾಂಸ್ಕೃತಿಕ ವೇದಿಕೆಗಳು, ಹೋರಾಟಗಾರರು ಸೇರಿಕೊಂಡು ಡಿ.28ರಂದು ‘ಜನರಾಜ್ಯೋತ್ಸವ’ ಆಚರಿಸಲು ಕನ್ನಡಪರ ಹೋರಾಟಗಾರರು ನಿರ್ಣಯ ಕೈಗೊಂಡಿದ್ದಾರೆ.
ನಗರದ ಖಾಸಗಿ ಹೊಟೇಲ್‍ನಲ್ಲಿ ಜನರಾಜ್ಯೋತ್ಸವ ಕಾರ್ಯಕ್ರಮದ ಕುರಿತ ಕನ್ನಡ ಚಳವಳಿಗಾರರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣವಾಗಿ 51ನೇ ವರ್ಷದ ಹೊಸ್ತಿಲಲ್ಲಿರುವ ಕನ್ನಡಿಗರ ಘನತೆಯ ಬದುಕಿನ ಹಿಂದೆ ಕನ್ನಡ ಸಂಘಟನೆಗಳ ತ್ಯಾಗ, ಹೋರಾಟದ ಪಥವಿದೆ. ಈ 50 ವರ್ಷಗಳಲ್ಲಿ ಕನ್ನಡ ಸಂಘಟನೆಗಳ ಸಾಧಿಸಿದ್ದೇನು ? ವಿಫಲತೆಗಳೇನು ಎಂಬ ಅವಲೋಕನ ನಡೆಯಬೇಕಿದೆ. ಕನ್ನಡ ಸಂಘಟನೆಗಳನ್ನು ಎಲ್ಲಾ ಸರಕಾರಗಳು ಹೇಗೆ ನಡೆಸಿಕೊಂಡಿವೆ? ಕನ್ನಡಿಗರ ಉದ್ಯೋಗ, ಮೀಸಲಾತಿ, ದ್ವಿಭಾಷಾ ನೀತಿ, ಹಿಂದಿ ಹೇರಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಡಿ.28ರ ‘ಜನರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಕನ್ನಡದ ಎಲ್ಲಾ ಕಟ್ಟಾಳುಗಳು ಭಾಗವಹಿಸಲಿದ್ದಾರೆ. ಈ ಮೂಲಕ ಸರಕಾರಕ್ಕೆ ಸ್ಪಷ್ಟ ಸಂದೇಶ ನೀಡಲಾಗುವುದು. ಮೈಸೂರು ರಾಜ್ಯವನ್ನು ‘ಕರ್ನಾಟಕ' ಎಂದು ನಾಮಕರಣ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕನ್ನಡದ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಕೋಟ್ಯಾಂತರ ಕನ್ನಡಿಗರ ಪರವಾಗಿ ಸನ್ಮಾನಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜನರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎರಡು ವಿಷಯಗಳ ಬಗ್ಗೆ ವಿಚಾರ ಸಂಕಿರಣ ನಡೆಯಲಿದ್ದು, ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. ಆ ಬಳಿಕ ಸಂಜೆ ಕನ್ನಡದ ಖ್ಯಾತ ಜನಪದ ಗಾಯಕರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯ, ಸಿನೆಮಾ ರಂಗದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ.
ಪ್ರತಿ ವರ್ಷ ಒಂದು ದಿನಾಂಕ ನಿರ್ಧರಿಸಿ, ಶಾಶ್ವತ ‘ಜನರಾಜ್ಯೋತ್ಸವ’ವಾಗಿ ಆಚರಿಸಬೇಕು. ರಾಜ್ಯದ ಭಾಷಾ ಹಕ್ಕು, ಹೋರಾಟಗಳ ಸ್ಮರಣೆ, ಕನ್ನಡನೀತಿಯ ವಿಮರ್ಶೆ, ವಿಶ್ಲೇಷಣೆ ನಿರ್ಣಯಗಳ ದಿನವಾಗಿ ಘೋಷಿಸಲಾಗುತ್ತದೆ. ಯಾವುದೇ ಸಂಘಟನೆಗಳು, ನಾನು ಎಂಬ ಮೇಲರಿಮೆ ಇಲ್ಲದೆ, ಮತ್ತೊಂದು ಸಂಘಟನೆಯನ್ನು ಕೀಳಾಗಿ ನೋಡದೇ ಎಲ್ಲರೂ ಕನ್ನಡದ ಕಟ್ಟಾಳುಗಳು ಎಂಬ ಒಂದೇ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಮತ್ತು ಕನ್ನಡದ ವಿಷಯಗಳಲ್ಲಿ ಒಂದಾಗುವ ಕುರಿತು ಸಭೆಯಲ್ಲಿ ಪ್ರತಿಜ್ಞೆ ಮಾಡಿದರು.
ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್, ಪತ್ರಕರ್ತ ನವೀನ್ ಸೂರಿಂಜೆ, ಜಯ ಕರ್ನಾಟಕದ ಜಗದೀಶ್, ಆರ್.ಎನ್.ಪ್ರಸಾದ್, ರೂಪೇಶ್ ರಾಜಣ್ಣ, ಗುರುದೇವ ನಾರಾಯಣ ಕುಮಾರ್, ಲಕ್ಷ್ಮೀ ಶ್ರೀನಿವಾಸ, ಪಡುಕೋಟೆ, ಮಂಜುನಾಥ ಗೌಡ, ದಿವ್ಯ ಆಲೂರು, ರವಿ ಶೆಟ್ಟಿ, ದಾ.ಪಿ.ಆಂಜಿನಪ್ಪ, ಲೋಕೇಶ ಗೌಡ, ನಿತೀಶ ಗೌಡ, ಟಿ.ತಿಮ್ಮೇಶ ಮತ್ತಿತರರು ಉಪಸ್ಥಿತರಿದ್ದರು.







