ಆ.3ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಜಾಗೃತಿ ಸಮಾವೇಶ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ದುರಾಡಳಿತ ಖಂಡಿಸಿ ಕನ್ನಡ ನಾಡು-ನುಡಿ ಜಾಗೃತಿ ಸಮಿತಿ ವತಿಯಿಂದ ಆ.3ರಂದು ನಗರದ ಪುರಭವನದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಜಾಗೃತಿ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಹೇಳಿದ್ದಾರೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ಕಲೆ, ಸಾಹಿತ್ಯ, ಸಂಸ್ಕೃ ತಿ, ಜನಪದಗಳ ಸಂವರ್ಧನೆಗಾಗಿ ಸ್ಥಾಪನೆಗೊಂಡ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕಸಾಪವನ್ನು ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರ, ಭ್ರಷ್ಟಾ ಚಾರಗಳ ಕೂಪದಲ್ಲಿ ಮುಳುಗಿಸಿ, ಧಿಕ್ಕು ದೆಸೆಗಳಿಲ್ಲದಂತೆ ಮಾಡಿ, ಕಸಾಪದ ಅಸ್ತಿತ್ವ, ಘನತೆ ಮತ್ತು ಪಾವಿತ್ರತೆಗಳಿಗೆ ತೀವ್ರ ಧಕ್ಕೆ ಉಂಟುಮಾಡುತ್ತಿರುವುದು ಬೇಸರದ ಸಂಗತಿ ಎಂದರು.
ಕಸಾಪ ಅಧ್ಯಕ್ಷ ಮಹೇಶ್ ಜೋಶಿಯ ದುರಾಡಳಿತ, ದುಂದುವೆಚ್ಚ, ಸರ್ವಾಧಿಕಾರದ ಏಕಸ್ವಾಮ್ಯ ನಿರ್ಧಾರಗಳಿಂದ ಕಸಾಪವನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಲಜ್ಜೆಗೇಡಿ ಹೆಜ್ಜೆಗಳನ್ನಿಡುತ್ತಿದ್ದಾರೆ. ಕನ್ನಡ ನಾಡು-ನುಡಿ ಜಾಗೃತಿ ಸಮಿತಿ'ಯ ಹೋರಾಟದ ಫಲವಾಗಿ ಪ್ರಸ್ತುತ ರಾಜ್ಯಾಧ್ಯಕ್ಷ ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಸಚಿವ ಸ್ಥಾನಮಾನದ ಸೌಲಭ್ಯಗಳನ್ನು ಸರಕಾರ ಹಿಂಪಡೆದುಕೊಂಡಿದೆ ಎಂದು ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದೂರದ ಊರುಗಳಲ್ಲಿ ವಾರ್ಷಿಕ ಸಭೆಗಳನ್ನು ನಡೆಸಿ ಆರ್ಥಿಕ ಅವ್ಯವಹಾರಗಳಿಗೆ ಅನುಮೋದನೆ ಪಡೆಯಲು ಮುಂದಾಗಿದ್ದನ್ನು ಕಾನೂನು ಹೋರಾಟದ ಮೂಲಕ ತಡೆಹಿಡಿಯಲಾಗಿದೆ. ಕಸಾಪದಲ್ಲಿ ಅಧ್ಯಕ್ಷ ನಡೆಸಿರುವ ಅವ್ಯವಹಾರಗಳನ್ನು ವಿಚಾರಣೆ ನಡೆಸಲು ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ಹೋರಾಟದ ತೀವ್ರತೆಯನ್ನು ಗಮನಿಸಿ ಬೆಂಬಲಿಸಿದ ಹಾಗೆ ಕಸಾಪದ ಆಂತರಿಕ ದುರಾಡಳಿತವನ್ನು ವಿರೋಧಿಸಿ ಪ್ರಮುಖ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಮಹೇಶ್ ಜೋಶಿಯ ಆರ್ಥಿಕ ಅವ್ಯವಹಾರಗಳನ್ನು ಕೊನೆಗಾಣಿಸಲು ಅಧ್ಯಕ್ಷರನ್ನು ಅಮಾನತುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಅವರಿಂದ ಆಗಿರುವ ಕರ್ತವ್ಯ ಲೋಪಗಳಿಗೆ ಮತ್ತು ಕಸಾಪಗೆ ಆಗಿರುವ ನಷ್ಟಗಳನ್ನು ಅವರಿಂದ ವೈಯಕ್ತಿಕವಾಗಿ ಭರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಷತ್ತಿನ ಉಳಿವಿಗಾಗಿ ಎಲ್ಲರೂ ಜಾಗೃತರಾಗಿ ಕೈಜೋಡಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಅಜೀವ ಸದಸ್ಯರಾದ ಸುನಂದಾ ಜಯರಾಮ್, ಮಾವಳ್ಳಿ ಶಂಕರ್, ಪ್ರೊ.ಬಿ. ಜಯಪ್ರಕಾಶ್‍ಗೌಡ ಉಪಸ್ಥಿತರಿದ್ದರು.







