38 ತಿಂಗಳ ಬಾಕಿ ಹಣ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು : 2020ರ ಜ.1ರಿಂದ ಶೇ.15ರ ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ಹಣವನ್ನು ರಾಜ್ಯ ಸರಕಾರವು ಕೂಡಲೇ ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಸಾರಿಗೆ ನೌಕರರು ನಗರದ ಫ್ರೀಡಂ ಪಾರ್ಕ್‍ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
2023ರ ಡಿ.31ರಲ್ಲಿದ್ದ ಸಾರಿಗೆ ನೌಕರರ ಮೂಲ ವೇತನಕ್ಕೆ ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ 2024ರ ಜ.1ರಿಂದ ಶೇ.25ರಷ್ಟು ವೇತನ ಹೆಚ್ಚಿಸಬೇಕು. ಇನ್ನಿತರ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಬಗೆಹರಿಸಬೇಕು ಎಂದು ಸತ್ಯಾಗ್ರಹನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಸ್ಟಾಪ್, ವರ್ಕರ್ಸ್ ಫೆಡರೇಷನ್‍ನ ಎಚ್.ವಿ.ಅನಂತ ಸುಬ್ಬರಾವ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳದ ಬಿ.ಜಯದೇವರಾಜೇ ಅರಸು, ವಿಜಯ್ ಭಾಸ್ಕರ್, ಅಚ್ಯುತ್ ಮಂಜುನಾಥ್, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಎಂ ಕಾರ್ಯದರ್ಶಿ ಡಾ.ಪ್ರಕಾಶ್ ಕೆ. ಮತ್ತಿತರರು ಹಾಜರಿದ್ದರು.





