ಸೆ.5ಕ್ಕೆ ಅಂತರ್ ರಾಷ್ಟ್ರೀಯ ಮೀಲಾದುನ್ನಬಿ ಸಮಾವೇಶ : ಎನ್.ಕೆ.ಎಂ.ಶಾಫಿ ಸಅದಿ

ಬೆಂಗಳೂರು, ಸೆ.1: ಪೈಗಂಬರ್ ಮುಹಮ್ಮದ್(ಸ) ಅವರ 1500ನೆ ಜನ್ಮ ದಿನಾಚರಣೆಯ ಪ್ರಯುಕ್ತ ಸೆ.5ರಂದು ನಗರದ ಅರಮನೆ ಮೈದಾನದ ಗೇಟ್ ನಂ 1ರಲ್ಲಿ ಅಂತರ್ ರಾಷ್ಟ್ರೀಯ ಮೀಲಾದುನ್ನಬಿ(ಸ) ಸಮಾವೇಶ ನಡೆಯಲಿದೆ ಎಂದು ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶವು ಜಂಟಿ ಮೀಲಾದ್ ಸಮಿತಿ, ಜುಲೂಸ್ ಎ ಮುಹಮ್ಮದಿ, ಆಲ್ ಕರ್ನಾಟಕ ಮೀಲಾದ್ ಒ ಜುಲೂಸ್ ಎ ರಹ್ಮತುಲ್ ಆಲಮೀನ್ ಸಮಿತಿ, ಸುನ್ನಿ ಜಂಇಯ್ಯತುಲ್ ಉಲಮಾ ಕರ್ನಾಟಕದ ಸಹಯೋಗದೊಂದಿಗೆ ನಡೆಯುತ್ತಿದೆ ಎಂದು ತಿಳಿಸಿದರು.
ಸಮಾವೇಶದ ಗೌರವ ಅತಿಥಿಗಳಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್, ಸಯ್ಯಿದ್ ಹಬೀಬ್ ಉಮರ್ ಬಿನ್ ಹಫೀಳ್(ಯಮನ್), ಶೈಖ್ ಅಬ್ದುಲ್ಲಾ ಅಬ್ದುಲ್ ಕಬೀರ್ ಅಬ್ದುಲ್ ಕರೀಮ್(ಮದೀನಾ), ಸಯ್ಯಿದ್ ಅಬ್‍ತಾನ್ ಅಲ್ ಶಾಮಿರಿ(ಮದೀನಾ), ಸಯ್ಯಿದ್ ಹಾಶಿಮ್ ಅಬ್ದುಲ್ ಖಾದಿರ್ ಅಲ್ ಜೀಲಾನಿ(ಬಗ್ದಾದ್), ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್, ಶೇಖ್ ಹಶ್ಮಿ ಅಬ್ದುಲ್ ಖದೀರ್ ಮನ್ಸೂರುದ್ದೀನ್(ಬಗ್ದಾದ್) ಭಾಗವಹಿಸಿ ಸಂದೇಶ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಮೌಲಾನಾ ಪೀರ್ ಸಯ್ಯಿದ್ ಮುಹಮ್ಮದ್ ಖಾಸೀಂ ಅಶ್ರಫ್ ಅಶ್ರಫಿ(ಕಚೋಚಾ ಶರೀಫ್), ಅಲ್ಲಮಾ ಮುಫ್ತಿ ಮುಹಮ್ಮದ್ ತೌಸೀಫ್ ರಝಾ ಖಾನ್ ಖಾದ್ರಿ ಬರೇಲ್ವಿ, ಮುಫ್ತಿ ಮುಹಮ್ಮದ್ ಅಖ್ತರ್ ಹುಸೇನ್ ಅಲೀಮಿ, ಹಝ್ರತ್ ಡಾ.ಮುಫ್ತಿ ಮುಹಮ್ಮದ್ ಸಜ್ಜಾದ್ ಮಿಸ್ಬಾಹಿ ರಝ್ವಿ, ಹಝ್ರತ್ ಅಲ್ಲಮಾ ಶಾ ಅಬ್ದುಲ್ ಖಾದಿರ್ ಶಾ ವಾಜಿದ್ ಸಮಾವೇಶದ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಶಾಫಿ ಸಅದಿ ಮಾಹಿತಿ ನೀಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಮರ್ಕಝೆ ಅಹ್ಲೆ ಸುನ್ನತ್ ಜಾಮಿಯಾ ಹಝ್ರತ್ ಬಿಲಾಲ್‍ನ ಅಧ್ಯಕ್ಷ ಅಮೀರ್ ಜಾನ್ ಖಾದ್ರಿ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಝಮೀರ್ ಅಹ್ಮದ್‍ಖಾನ್, ಡಾ.ಜಿ.ಪರಮೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎನ್.ಎ.ಹಾರಿಸ್, ರಿಝ್ವಾನ್ ಅರ್ಶದ್ ಉಪಸ್ಥಿತರಿರುತ್ತಾರೆ ಎಂದು ಅವರು ಹೇಳಿದರು.
ಸಮಾಜದಲ್ಲಿ ವಿವಿಧ ರೀತಿಯ ಕಲಹಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ರವಾದಿ ಅವರ ಪಾಠಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಮುದಾಯಗಳಲ್ಲಿ ಪರಿವರ್ತನೆ ತರಬೇಕು ಎಂಬ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶಾಫಿ ಸಅದಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜುಲೂಸ್ ಎ ಮುಹಮ್ಮದಿಯ ಅಧ್ಯಕ್ಷ ಮುಹೀದುರ್ರಹ್ಮಾನ್, ಕಾರ್ಯದರ್ಶಿ ಅಪ್ಸರ್ ಬೇಗ್, ಮೌಲಾನಾ ಝುಲ್ಫಿಖರ್ ನೂರಿ, ಜುಮ್ಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್, ಆಲ್ ಕರ್ನಾಟಕ ಮೀಲಾದ್ ಒ ಜುಲೂಸ್ ಎ ರಹ್ಮತುಲ್ ಆಲಮೀನ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಶರೀಫ್, ನಿವೃತ್ತ ಡಿಸಿಪಿ ಜಿ.ಎ.ಬಾವ ಸೇರಿದಂತೆ ಮತ್ತಿತರರು ಹಾಜರಿದ್ದರು.







