545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿ ಹಗರಣ : ಮಾಜಿ ಉಪಮುಖ್ಯಮಂತ್ರಿ ವಿಚಾರಣೆಗೆ ಹಾಜರು

ಡಾ.ಸಿಎನ್ ಅಶ್ವತ್ಥ್ ನಾರಾಯಣ
ಬೆಂಗಳೂರು : 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿ ಹಗರಣ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಡಾ.ಸಿಎನ್ ಅಶ್ವತ್ಥ್ ನಾರಾಯಣ ವಿಶೇಷ ತನಿಖಾ ತಂಡ(ಸಿಟ್) ಮುಂದೆ ವಿಚಾರಣೆಗೆ ಹಾಜರಾದರು.
ನೇಮಕಾತಿ ಹಗರಣದಲ್ಲಿ ಮಾಗಡಿ ಮೂಲದವರು ಅತಿ ಹೆಚ್ಚಾಗಿ ಆಯ್ಕೆ ಆಗಿದ್ದು, ಇದಕ್ಕೆ ಅಶ್ವತ್ಥ್ ನಾರಾಯಣ ಮಾಡಿಸಿದ್ದಾರೆಂದು ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಟ್, ಅಶ್ವತ್ಥ್ ನಾರಾಯಣ ಅವರಿಗೆ ನೋಟಿಸ್ ನೀಡಿತ್ತು.
ಅದರಂತೆ ಸೋಮವಾರ ವಿಚಾರಣೆ ಹಾಜರಾದ ಅಶ್ವತ್ಥ್ ನಾರಾಯಣ ತನಿಖಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ ದಾಖಲು ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ಇದೊಂದು ರಾಜಕೀಯ ಪ್ರೇರಿತ ಎಂದು ದೂರಿದರು.
545 ಪಿಎಸ್ಸೈ ಹುದ್ದೆಗಳ ಭರ್ತಿಗಾಗಿ 2021 ಅಕ್ಟೋಬರ್ 3ರಂದು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿನ 93 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಹಣ ನೀಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು. ಪ್ರಕರಣದ ತನಿಖೆಯನ್ನು ಸರಕಾರ ಸಿಟ್ಗೆ ವಹಿಸಿತ್ತು.
‘ಪಿಎಸ್ಸೈ ತನಿಖೆ ಮುಗಿದಿಲ್ಲ. ಸಿಟ್ನವರಿಗೆ ತನಿಖೆ ವೇಳೆ ಏನೆಲ್ಲ ಮಾಹಿತಿ ಸಿಗುತ್ತದೆಯೋ, ಅದನ್ನು ಆಧರಿಸಿ ಸಂಬಂಧಿಸಿದವರನ್ನು ವಿಚಾರಣೆಗೆ ಕರೆಯುತ್ತಾರೆ’
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ







