ಮಾ.7ರೊಳಗಾಗಿ ನೀರಿನ ಟ್ಯಾಂಕರ್ ಮಾಲೀಕರು ನೊಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ

ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ಕಸಿಯುವರನ್ನು ನಿಯಂತ್ರಿಸುವ ಸಲುವಾಗಿ ಮಾ.1 ರಿಂದ ಮಾ.7ನೇ ತಾರೀಕಿನ ಒಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಂದು ಹೇಳಿದ್ದಾರೆ.
ನಗರದ ಕಾವೇರಿ ಭವನದಲ್ಲಿ ಆಯೋಜಿಸಿದ್ದ ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಾ.7ರೊಳಗೆ ನೀರಿನ ಟ್ಯಾಂಕರ್ ವಾಹನ ನೊಂದಣಿ ಮಾಡದಿದ್ದರೆ ನೀರು ಸರಬರಾಜು ಮಾಡಲು ಅವಕಾಶ ಮಾಡಿಕೊಡುವುದಿಲ್ಲ. ನೋಂದಣಿ ಮಾಡಿಕೊಂಡು, ಪರವಾನಗಿ ಪಡೆದು ನೀರು ಸರಬರಾಜು ಮಾಡಬೇಕಿದೆ. ಒಂದು ವೇಳೆ ನೊಂದಣಿ ಮಾಡಿಕೊಳ್ಳದೆ, ನೀರು ಸರಬರಾಜು ಮಾಡುವವರ ಟ್ಯಾಂಕರ್ ಅನ್ನು ವಶಕ್ಕೆ ಪಡೆಯುತ್ತೇವೆ ಎಂದರು.
ಪಾಲಿಕೆಯು ನೀರಿನ ಟ್ಯಾಂಕರ್ ಗಳ ನೊಂದಣಿಗಾಗಿ ತಂತ್ರಾಂಶವನ್ನು ರಚಿಸುವ ಕಾರ್ಯ ಮಾಡಿದೆ. ಪಾಲಿಕೆ ರೂಪಿಸುವ ತಂತ್ರಾಂಶದಲ್ಲಿ ನೋಂದಣಿ ಮಾಡದ ನೀರಿನ ಟ್ಯಾಂಕರ್ ತೊಂದರೆಯಾಗಲಿದೆ. ನೀರಿನ ಸಮಸ್ಯೆೆಯಿರುವ 110 ಹಳ್ಳಿಗಳು ಬರುವ 30 ವಾರ್ಡ್ ಗಳಲ್ಲಿ ಬೆಂಗಳೂರು ಜಲಮಂಡಳಿ ತಲಾ ಒಬ್ಬ ಎಇ ಹಾಗೂ ಪಾಲಿಕೆಯ ತಲಾ ಒಬ್ಬ ಎಇ ವಾರ್ಡ್ ಎಂಜಿನಿಯರ್‌ಗಳನ್ನು ನಿಯೋಜಿಸಲಿದ್ದೇವೆ ಎಂದರು.
ಜಲಮಂಡಳಿ, ನಗರ ಜಿಲ್ಲಾಧಿಕಾರಿಗಳ ಮೂಲಕ 200 ನೀರಿನ ಟ್ಯಾಂಕರ್ ಪಡೆದುಕೊಳ್ಳುತ್ತಿದ್ದೇವೆ. 100 ನೀರಿನ ಟ್ಯಾಂಕರ್ 110 ಹಳ್ಳಿಗಳಿಗೆ ಹಾಗೂ ಉಳಿದ 100 ನೀರಿನ ಟ್ಯಾಂಕರ್ ಪಾಲಿಕೆಯ ಉಳಿದ ವಾರ್ಡ್ ಗಳಿಗೆ ನೀರು ಪೂರೈಸಲಿವೆ. ಜಲಮಂಡಳಿ ಹಾಗೂ ಬಿಬಿಎಂಪಿ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಪಡೆದ ಟ್ಯಾಂಕರ್ ಗಳ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಥವಾ ಇನ್ನಷ್ಟು ಕಾನೂನಿನಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಬಿಬಿಎಂಪಿ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಹಾಗೂ ರಾಜರಾಜೇಶ್ವರಿ ನಗರ ವಲಯದ ಆಯುಕ್ತ ಸುರೋಳರ್ ವಿಕಾಸ್ ಕಿಶೋರ್, ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶೋಭಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







