ನ.7ಕ್ಕೆ ಬ್ರಾಹ್ಮಣ ಸಮುದಾಯದ ವಿವಿಧ ಯೋಜನೆಗಳಿಗೆ ಚಾಲನೆ

ಬೆಂಗಳೂರು : ರಾಜ್ಯ ಸರಕಾರದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಉದ್ಯಮಶೀಲತೆ ವೃದ್ದಿಸುವಂತೆ ಮಾಡಲು ಬ್ರಾಹ್ಮಣ ಸಮುದಾಯದ ಸದಸ್ಯರಿಗೆ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ, ಚಾಣಕ್ಯ ಆಡಳಿತ ತರಬೇತಿ ಸೇರಿದಂತೆ ಹಲವು ಯೋಜನೆಗಳಿಗೆ ನ.7ರಂದು ಚಾಲನೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಹೇಳಿದ್ದಾರೆ.
ಬುಧವಾರ ನಗರದ ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.7ರಂದು ಶೇಷಾದ್ರಿ ರಸ್ತೆಯ ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿವತಿಯಿಂದ ಆಚಾರ್ಯತ್ರಯರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ, ಚಾಣಕ್ಯ ಆಡಳಿತ ತರಬೇತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಹಿಸಲಿದ್ದಾರೆ. ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕರಾದ ವಿಶ್ವಾಸ ವೈದ್ಯ, ಯು.ಬಿ.ವೆಂಕಟೇಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರರ್ ಕುಮಾರ್ ಕಟಾರಿಯಾ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸನ್ಮಾನಿತರು: ಸಾಹಿತಿ, ಅನುವಾದಕಾರ ಬಿ.ಎಸ್.ಜಯಪ್ರಕಾಶ್ ನಾರಾಯಣ್, ಬಿ.ವಿ.ಆಚಾರ್ಯ, ಡಾ.ಎನ್.ಅನಂತರಾಮನ್, ಡಾ.ಶ್ರೀನಾಥ್, ಆರ್.ವಿ.ಜಾಗೀರ್ ದಾರ್, ಕ್ಯಾಪ್ಟನ್ ಗೋಪಿನಾಥ್, ವಿದ್ವಾನ್ ಬಿ.ಕೆ.ಅನಂತರಾವ್, ರಘುತ್ತೋಮ್ ಕೊಪ್ಪರ್ ವಿವಿಧ ಕ್ಷೇತ್ರ ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಬ್ರಾಹ್ಮಣ ಸಮುದಾಯದಲ್ಲಿ ಉದ್ಯಮಶೀಲತೆ ವೃದ್ಧಿಸುವಂತೆ ಪ್ರಸಕ್ತ ಸಾಲಿನಿಂದ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.ಈಗಾಗಲೇ 1 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದು, 400 ಮಂದಿಯನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ನ.7ರಂದು ನೇರ ಸಾಲ ನೀಡಲಾಗುವುದು.ಅದೇ ರೀತಿ, ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಮುದಾಯದ 100 ಅಭ್ಯರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿ ಸಹಾಯ ಧನ ಸಹ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ದೀಪಾಶ್ರೀ, ನಿರ್ದೇಶಕರಾದ ಗುರುರಾಜ ವಾದಿರಾಜ ಬಳಗಾನೂರ, ಪಿ.ಶ್ರೀನಿವಾಸ ಮೂರ್ತಿ, ವೆಂಕೋಬ ರಾವ್, ಡಾ.ಜಗದೀಶ್ ಡಿ.ಆರ್, ಪಿ.ಎಂ.ಮಾಲತೇಶ್ ಸೇರಿದಂತೆ ಪ್ರಮುಖರಿದ್ದರು.







