ಬೆಂಗಳೂರು ವಿವಿ: ಭೌತಶಾಸ್ತ್ರ ವಿಭಾಗದಲ್ಲಿ ಅಸ್ಮಾಬಾನುಗೆ 7 ಚಿನ್ನ

ಅಸ್ಮಾಬಾನು
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಸ್ನಾತಕೋತ್ತರ ಪದವಿಯ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅಸ್ಮಾಬಾನು ಅವರು 7 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರಿನ ಅಬ್ಬಿಗೆರೆ ನಿವಾಸಿ ಆಗಿರುವ ಅಸ್ಮಾಬಾನು, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಭೌತಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏಳು ಚಿನ್ನದ ಪದಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಕುರಿತು ವಾರ್ತಾಭಾರತಿ ಪತ್ರಿಕೆವೊಂದಿಗೆ ಮಾತನಾಡಿದ ಅಸ್ಮಾಬಾನು, “ತಾಯಿ ಕೂಡಾ ಶಿಕ್ಷಕಿಯಾಗಿದ್ದು, ಅವರೇ ನನಗೆ ಶಿಕ್ಷಣಕ್ಕೆ ಸ್ಪೂರ್ತಿ. ನನ್ನ ಸಾಧನೆಯ ಹಿಂದೆ ತಾಯಿಯ ಶ್ರಮವಿದೆ. ಅದೇ ರೀತಿ, ಭೌತಶಾಸ್ತ್ರದ ವಿಭಾಗದ ಪ್ರಾಧ್ಯಪಕರೂ, ಒಳ್ಳೆಯ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿದರು” ಎಂದು ಹೇಳಿದರು.
ಮಂಗಳವಾರ(ಅ.17) ಸೆಂಟರ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯುವ ಬೆಂಗಳೂರು ವಿವಿಯ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಸ್ಮಾಬಾನು ಅವರಿಗೆ ಪದಕ, ಪ್ರಮಾಣ ಪತ್ರ ಪ್ರದಾನ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.





