ಪರಿಶಿಷ್ಟ ಜಾತಿ ಸಮುದಾಯಗಳ ಹಿತಾಸಕ್ತಿ ಪರಿಶೀಲಿಸಲು ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ?

ಬೆಂಗಳೂರು: ಮಾದಿಗ ಸಮುದಾಯ ಸೇರಿದಂತೆ ಇತರ ಪರಿಶಿಷ್ಟ ಜಾತಿ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಸರಕಾರದ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಪರಿಶಿಷ್ಟ ಜಾತಿಗಳಿಗೆ ನಿಗದಿಯಾದ ಮೀಸಲಾತಿ ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳು ಸಮುದಾಯಗಳಲ್ಲಿ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಮಾದಿಗ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣಕ್ಕಾಗಿ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯ ಸರಕಾರಗಳು ಭಾರತ ಸರಕಾರಕ್ಕೆ ಮನವಿ ಸಲ್ಲಿಸಿವೆ.
ಈ ಹಿನ್ನಲ್ಲೆಯಲ್ಲಿ ಪ್ರಧಾನಿ ಮೋದಿ ನಿರ್ದೇಶನದ ಮೇರೆಗೆ ಮಾದಿಗ ಸಮುದಾಯ ಸೇರಿದಂತೆ ಇತರ ಪರಿಶಿಷ್ಟ ಜಾತಿ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಸರಕಾರದ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಮಿತಿಯು ಗೃಹ ವ್ಯವಹಾರಗಳ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಕಾನೂನು ವ್ಯವಹಾರಗಳ ಇಲಾಖೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಈ ಕಾರ್ಯದರ್ಶಿಗಳ ಸಮಿತಿಯ ಮೊದಲ ಸಭೆಯನ್ನು ಜ.23ಕ್ಕೆ ನಿಗದಿಪಡಿಸಲಾಗಿದೆ. ಈ ವಿಷಯವು ವಿವಿಧ ನ್ಯಾಯಾಲಯಗಳಲ್ಲಿದೆ ಮತ್ತು 2011ರ ಸಿವಿಲ್ ಮೇಲ್ಮನವಿ ಸಂಖ್ಯೆ 2317, ಸುಪ್ರೀಂ ಕೋರ್ಟ್‍ನ 7 ನ್ಯಾಯಾಧೀಶರ ಪೀಠದ ಪರಿಗಣನೆಯಲ್ಲಿದೆ.







