ದೇಶದಲ್ಲಿನ ಎಲ್ಲಾ ಜಾತಿಗಳ ಸಮಗ್ರ ಜನಗಣತಿ ಅಗತ್ಯ: ಕೇಂದ್ರ ಸಚಿವ ರಾಮ್‍ದಾಸ್ ಅಠಾವಳೆ

ಬೆಂಗಳೂರು: ದೇಶದಲ್ಲಿನ ಎಲ್ಲ ಜಾತಿಗಳ ಸಮಗ್ರ ಜನಗಣತಿ ಅಗತ್ಯ. ಸ್ವಾತಂತ್ರ್ಯ ನಂತರ ಸುಮಾರು 70 ವರ್ಷಗಳ ಕಾಲ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ನಿರ್ಲಕ್ಷಿಸಿತ್ತು. ಆದರೆ, ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾತಿ ಆಧಾರಿತ ಜನಗಣತಿಗೆ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯಕರ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮ್‍ದಾಸ್ ಅಠಾವಳೆ ತಿಳಿಸಿದರು.
ಶನಿವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್.ಪಿ.ಐ) ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದ ಭಾಗವಾಗಿದ್ದರೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಬೇಂಬ ಒತ್ತಾಯಕ್ಕೆ ನಮ್ಮ ಪಕ್ಷದ ಸಹಮತವು ಇದೆ ಎಂದರು.
ದೇಶದಲ್ಲಿ ಪರಿಶಿಷ್ಟ ಜಾತಿಗೆ ಶೇ.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ ಪರಿಶಿಷ್ಟ ಜಾತಿಯವರ ಜನಸಂಖ್ಯೆ ಶೇ.16.6 ಹಾಗೂ ಪರಿಶಿಷ್ಟ ಪಂಗಡದವರ ಜನಸಂಖ್ಯೆ ಶೇ.8.4ರಷ್ಟಿದೆ ಎಂದು ಅಂದಾಜಿಸಲಾಗಿದೆ ಎಂದು ರಾಮ್‍ದಾಸ್ ಅಠಾವಳೆ ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ಸಿಗಬೇಕಿದೆ. ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದೆ ಎಂದು ರಾಮ್‍ದಾಸ್ ಅಠಾವಳೆ ತಿಳಿಸಿದರು.
ಅಂತರ್ ಜಾತಿ ಹಾಗೂ ಧರ್ಮೀಯ ವಿವಾಹಗಳನ್ನು ಉತ್ತೇಜಿಸಲು ಕೇಂದ್ರ ಸರಕಾರ ಎರಡೂವರೆ ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ನೀಡುತ್ತಿದೆ. ಇದರಿಂದಾಗಿ, ದೇಶದಲ್ಲಿ ವಾರ್ಷಿಕ ಸುಮಾರು 1.50 ಲಕ್ಷ ಲಕ್ಷ ಅಂತರ್ ಜಾತೀಯ ವಿವಾಹಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಸಾಮಾಜಿಕ ನ್ಯಾಯ ಮತ್ತು ತಳಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಇದರಿಂದಾಗಿ, ಕಳೆದ 10 ವರ್ಷಗಳಲ್ಲಿ ತಳ ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಷಯದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ರಾಮ್‍ದಾಸ್ ಅಠಾವಳೆ ತಿಳಿಸಿದರು.







