‘ಸರ್ವ ಜನಾಂಗದ ಶಾಂತಿಯ ತೋಟ’ಕ್ಕೆ ರಕ್ತದ ಕಲೆಗಳು ಮೆತ್ತಿಕೊಂಡಿವೆ : ಪ್ರೊ.ಬರಗೂರು
17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು : ‘ಸರ್ವಜನಾಂಗದ ಶಾಂತಿಯ ತೋಟ’ ಅನ್ನುವುದು ಕೇವಲ ಸಾಲಲ್ಲ, ಅದೊಂದು ರೂಪಕ. ಆದರೆ, ಇವತ್ತು ಸರ್ವಜನಾಂಗದ ಶಾಂತಿಯ ತೋಟದ ಒಳಗಡೆ ಇರುವ ಹಸಿರು ಎಲೆಗಳ ಮೇಲೆ ರಕ್ತದ ಕಲೆಗಳು ಮೆತ್ತಿಕೊಂಡಿರುವ ಸಂದರ್ಭದಲ್ಲಿದ್ದೇವೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಚಾಮರಾಜಪೇಟೆಯಲ್ಲಿರುವ ಡಾ.ಅಂಬರೀಶ್ ಆಡಿಟೋರಿಯಂನಲ್ಲಿ ನಡೆದ 17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರಳುತ್ತಿರುವಂತಹ ಹೂವುಗಳು ನಲುಗಿ ಹೋಗುತ್ತಿರುವ ಸಂದರ್ಭದಲ್ಲಿದ್ದೇವೆ. ಆ ತೋಟದಲ್ಲಿ ಇರುವಂತಹ ಬೇರುಗಳು ಒಣಗಿ ಹೋಗುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಇಂಥ ಸಂದರ್ಭದಲ್ಲಿ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಆಶಯವನ್ನು ನಮ್ಮ ಸಮಾಜದ, ಮನಸ್ಸಿನ ಭಾಗ ಮಾಡಿಕೊಂಡರೆ; ಅದು ಕನ್ನಡದ ವಿವೇಕವಾಗಲಿದೆ ಎಂದರು.
ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳ ಸಮತೋಲನ ಇಲ್ಲದೆ ಯಾವುದೇ ದೇಶ ಉದ್ದಾರವಾಗಲು ಸಾಧ್ಯವಿಲ್ಲ. ಹಾಗಾಗಿ, ಕುವೆಂಪು ಪ್ರತಿಪಾದಿಸಿದ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಇವತ್ತಿನ ಸಂದರ್ಭಕ್ಕಂತೂ ಅಗತ್ಯವಾದ ಮತ್ತು ಅದರ ಅನುಷ್ಠಾನವನ್ನು ಮಾಡಲೇಬೇಕಾದಂತಹ ಅನಿವಾರ್ಯತೆ ಬಂದಿದೆ ಎಂದು ಪ್ರೊ.ಬರಗೂರು ತಿಳಿಸಿದರು.
ಕರ್ನಾಟಕದ ಇತ್ತೀಚಿನ ಕೆಲವು ವರ್ಷಗಳ ಬೆಳವಣಿಗೆಯನ್ನು ಗಮನಿಸಿದರೆ ಯಾವುದೇ ಸರಕಾರ ಇರಲಿ, ಯಾವ ಪಕ್ಷವಿರಲಿ, ಶಿಕ್ಷಣದಲ್ಲಿ ಕನ್ನಡಕ್ಕೆ ಕುತ್ತು ಬಂದಿರುವ ಸಂದರ್ಭದಲ್ಲಿ ನಾವು ಹಾದು ಹೋಗುತ್ತಿದ್ದೇವೆ. ನಮ್ಮಲ್ಲಿ 41,088 ಸರಕಾರಿ ಶಾಲೆಗಳಿವೆ. 61 ಸಾವಿರಕ್ಕಿಂತ ಹೆಚ್ಚು ಅಂಗನವಾಡಿಗಳಿವೆ. ಇಡೀ ದೇಶದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಪ್ರಾಥಮಿಕ ಶಾಲೆಗಳಿವೆ. ಆದರೆ, ಶೈಕ್ಷಣಿಕ ಸಮಾನತೆಯೊಂದನ್ನು ಈ ದೇಶದಲ್ಲಿ ಅಷ್ಟೇ ಅಲ್ಲ, ಕರ್ನಾಟಕದಲ್ಲಿ ತರಲಾಗಿದೆಯೇ? ಪ್ರಾಥಮಿಕ ಶಿಕ್ಷಣದಲ್ಲಿ ಸಮಾನ ಶಿಕ್ಷಣ ಬರದೇ ಹೋದರೆ, ನಾವು ಪ್ರಜಾಸತ್ತಾತ್ಮಕ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದೇವೆ ಎಂದರ್ಥ ಎಂದು ಪ್ರೊ.ಬರಗೂರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ 17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶೂದ್ರ ಶ್ರೀನಿವಾಸ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ.ಎಚ್.ಎಸ್.ಶ್ರೀಮತಿ, ಕಸಾಪ ಆಡಳಿತಾಧಿಕಾರಿ ಕೆ.ಎ.ದಯಾನಂದ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಹಲವರು ಉಪಸ್ಥಿತರಿದ್ದರು.
ಕಸಾಪದಲ್ಲಿ ಹಣವಿಲ್ಲ, ಉದ್ಯೋಗಿಗಳಿಗೆ ಸಂಬಳವಿಲ್ಲ ಸಾಹಿತ್ಯ ಸಮ್ಮೇಳನದಲ್ಲಿ ಅಳಲು ತೋಡಿಕೊಂಡ ಆಡಳಿತಾಧಿಕಾರಿ
ಬೆಂಗಳೂರು, ಅ.30: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಣವಿಲ್ಲದೆ ಇಲ್ಲಿನ ಉದ್ಯೋಗಿಗಳಿಗೆ ಸಂಬಳ ನೀಡದ ಸ್ಥಿತಿಯಿದೆ. ನಾನು ಇಲ್ಲಿಗೆ ಆಡಳಿತಾಧಿಕಾರಿಯಾಗಿ ಬಂದ ನಂತರ ಸರಕಾರದಲ್ಲಿ ಅನುದಾನ ಕೇಳಲು ಆರಂಭಿಸಿದ್ದು, ಈವರೆಗೂ ಅನುದಾನ ಬಂದಿಲ್ಲ ಎಂದು ಐಎಎಸ್ ಅಧಿಕಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಆಡಳಿತಾಧಿಕಾರಿ ಕೆ.ಎ.ದಯಾನಂದ ಅಳಲು ತೋಡಿಕೊಂಡರು.
ಶುಕ್ರವಾರ ನಗರದ ಚಾಮರಾಜಪೇಟೆಯಲ್ಲಿರುವ ಡಾ.ಅಂಬರೀಶ್ ಆಡಿಟೋರಿಯಂನಲ್ಲಿ ನಡೆದ 17ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕಸಾಪದ ಆಡಳಿತ ದುಸ್ಥಿತಿಯನ್ನು ತೆರೆದಿಟ್ಟ ಅವರು,ಇವತ್ತಿಗೂ ಕಸಾಪದ ಪರಿಸ್ಥಿತಿ ಸರಿದಾರಿಗೆ ಬಂದಿಲ್ಲ. ಈಗಲೂ ನಮ್ಮ ಅಧಿಕಾರಿಗಳಿಗೆ ಸಂಬಳ ಕೊಡಲು ಸರಕಾರದ ಆದೇಶವಿಲ್ಲ. ಇವತ್ತಿನವರೆಗೂ ಪರಿಷತ್ತಿನ ಸಭೆ ನಡೆದಿಲ್ಲ. ಇಲ್ಲಿನ ಸಮಸ್ಯೆಗಳ ಪರಿಹಾರವಾಗಬೇಕಾದರೆ ದಯವಿಟ್ಟು ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿಗಳನ್ನು ಕೂರಿಸಲು ಅವಕಾಶ ನೀಡಬೇಡಿ. ಅಧಿಕಾರಿಗಳು ಇದ್ದರೆ ಬರೀ ಯಾಂತ್ರಿಕವಾಗಿ ಕೆಲಸ ಮಾಡುತ್ತಾರೆ ಅಷ್ಟೇ. ಇದರ ಜತೆಗೆ ಚುನಾವಣಾ ಬೈಲಾ ಕೂಡ ತಿದ್ದುಪಡಿಯಾಗಬೇಕು. ಲಕ್ಷಾಂತರ ರೂ. ಖರ್ಚು ಮಾಡುವುದನ್ನು ತಡೆಯಬೇಕು ಎಂದು ದಯಾನಂದ ಸಲಹೆ ನೀಡಿದರು.






