ಪುತ್ತೂರಿನ ಯುವಕ ಬೆಂಗಳೂರಿನ ಲಾಡ್ಜ್ನಲ್ಲಿ ಅನುಮಾನಾಸ್ಪದ ಸಾವು

ಸಾಂದರ್ಭಿಕ ಚಿತ್ರ
ಬೆಂಗಳೂರು : ಬೆಂಗಳೂರಿನ ಲಾಡ್ಜ್ವೊಂದರಲ್ಲಿ ತಂಗಿದ್ದ ಪುತ್ತೂರು ಮೂಲದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪುತ್ತೂರಿನ ತಕ್ಷಿತ್ (20) ಮೃತಪಟ್ಟಿರುವ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ಮಡಿಕೇರಿ ಜಿಲ್ಲೆ ವಿರಾಜಪೇಟೆಯ ಯುವತಿಯೊಂದಿಗೆ ಪುತ್ತೂರಿನಿಂದ ತಕ್ಷಿತ್ ನಗರಕ್ಕೆ ಬಂದು ಮಡಿವಾಳದ ಮಾರುತಿನಗರದ ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದರು. ಇವರಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಮೊನ್ನೆ ರಾತ್ರಿ ಯುವತಿ ಊರಿಗೆ ವಾಪಸ್ ಹೋಗಿದ್ದಾಳೆ. ಹಾಗಾಗಿ ಕೊಠಡಿಯಲ್ಲಿ ಆತ ಒಬ್ಬನೇ ಇದ್ದನು ಎನ್ನಲಾಗಿದೆ.
ಎಂಟು ದಿನಗಳ ಕಾಲ ಊಟ, ತಿಂಡಿಯನ್ನು ಆನ್ಲೈನ್ ಮೂಲಕ ಲಾಡ್ಜ್ ಕೊಠಡಿಗೆ ತರಿಸಿಕೊಂಡಿದ್ದನು. ಶುಕ್ರವಾರ ಸಂಜೆವರೆಗೂ ಕೊಠಡಿಯಿಂದ ಯಾರೂ ಹೊರ ಬರದಿದ್ದಾಗ ಅನುಮಾನಗೊಂಡು ಸಿಬ್ಬಂದಿ ಬಾಗಿಲು ತೆಗೆದು ನೋಡಿದಾಗ ಹಾಸಿಗೆ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಯುವಕ ಮೃತಪಟ್ಟಿರುವುದು ಕಂಡು ಬಂದಿದೆ.
ಈ ಸಂಬಂಧ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಡಿವಾಳ ಠಾಣಾ ಪೊಲೀಸರು ಕೊಠಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.





