ಬೆಂಗಳೂರು | ರಸ್ತೆ ಅಪಘಾತ : ಬಿ.ಟೆಕ್ ವಿದ್ಯಾರ್ಥಿ ಮೃತ್ಯು

ಸಾಂದರ್ಭಿಕ ಚಿತ್ರ
ಬೆಂಗಳೂರು : ಟೀ ಕುಡಿಯಲು ದ್ವಿಚಕ್ರ ವಾಹನದಲ್ಲಿ ತೆರಳಿ ಹಿಂತಿರುಗುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿ.ಟೆಕ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಇಲ್ಲಿನ ಚಿಕ್ಕಬಾಣಾವರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಪ್ತಗಿರಿ ಕಾಲೇಜಿನ ಬಳಿ ಗುರುವಾರ ನಡೆದಿದೆ.
ಉತ್ತರ ಪ್ರದೇಶದ ಲಕ್ನೋ ನಗರದ ನಿವಾಸಿ ಶಿವಂ ಯಾದವ್(22) ಮೃತಪಟ್ಟ ವಿದ್ಯಾರ್ಥಿ. ಈತ ನಗರದ ಸೌಂದರ್ಯ ಲೇಔಟ್ನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದು, ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದಲ್ಲಿ 3ನೇ ವರ್ಷದ ಬಿ.ಟೆಕ್ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜು.10ರ ಗುರುವಾರ ಮುಂಜಾನೆ ತನ್ನ ದ್ವಿಚಕ್ರ ವಾಹನದಲ್ಲಿ ಟೀ ಕುಡಿಯಲು ಚಿಕ್ಕಬಾಣಾವರಕ್ಕೆ ಹೋಗಿ ಹಿಂತಿರುಗುವಾಗ ಸಪ್ತಗಿರಿ ಕಾಲೇಜಿನ ಬಳಿ ನಿಯಂತ್ರಣ ತಪ್ಪಿ ಪುಟ್ಪಾತ್ಗೆ ಢಿಕ್ಕಿ ಹೊಡೆದು ರಸ್ತೆ ಮೇಲೆ ಉರುಳಿ ಬಿದ್ದಿದ್ದಾನೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಗಾಯಗೊಂಡ ಶಿವಂಯಾದವ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಬಾಣಾವರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





