ಜೈಲಿನಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಹೊರಗಡೆ ಚಿಕಿತ್ಸೆ ಕೊಡಿಸಲು ನಟ ದರ್ಶನ್ ಮನವಿ
ಆರೋಗ್ಯದ ಕುರಿತು ವರದಿ ಸಲ್ಲಿಸಲು ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ

ನಟ ದರ್ಶನ್
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಹೊರಗಡೆ ಚಿಕಿತ್ಸೆ ಕೊಡಿಸಬೇಕು ಎಂದು ನಟ ದರ್ಶನ್ ಇಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್, ತಮ್ಮ ಬೆನ್ನುನೋವಿಗೆ ಹೊರಗಡೆ ಚಿಕಿತ್ಸೆ ಕೊಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಬೆನ್ನುನೋವಿನ ಹಿನ್ನೆಲೆಯಲ್ಲಿ ಫಿಸಿಯೋಥೆರಪಿ ನೀಡುವಂತೆ ನ್ಯಾಯಾಲಯ ಈಗಾಗಲೇ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಕೇವಲ ಮೂರು ದಿನ ಮಾತ್ರ ಫಿಸಿಯೋಥೆರಪಿ ನೀಡಲಾಗಿದ್ದು, ಇದರಿಂದ ಬೆನ್ನುನೋವು ಕಡಿಮೆಯಾಗಿಲ್ಲ ಎಂದು ದರ್ಶನ್ ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ದರ್ಶನ್ ಅವರ ಆರೋಗ್ಯ ಸಮಸ್ಯೆ ಹಾಗೂ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.




