‘ಎಸ್ಐಆರ್’ ನಟ ಶಿವರಾಜ್ ಕುಮಾರ್ಗೆ ನೋಟಿಸ್ ನೀಡಿಲ್ಲ: ಚುನಾವಣಾಧಿಕಾರಿ ಸ್ಪಷ್ಟನೆ

PC:X@NimmaShivanna
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ವೇಳೆ ಬ್ಯಾಟರಾಯನಪುರ ಕ್ಷೇತ್ರದ ಮತದಾರರಾದ ಚಿತ್ರನಟ ಶಿವರಾಜ್ ಕುಮಾರ್ ಯಾವುದೇ ನೋಟಿಸ್ ನೀಡಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆಯ ಅಪರ ಚುನಾವಣಾಧಿಕಾರಿ ಕಾಂತರಾಜು ಪಿ.ಎಸ್. ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಶಿವರಾಜ್ ಕುಮಾರ್ಗೆ ವಿಚಾರಣಾ ನೋಟಿಸ್ ನೀಡಿರುವುದಾಗಿ ಸುದ್ದಿ ಪ್ರಚಾರವಾಗಿದ್ದು, ಈ ಪ್ರಕರಣದಲ್ಲಿ ಸದರಿ ನಟರು ತಮ್ಮ ಗಣತಿ ನಮೂನೆಯಲ್ಲಿ ಹಿಂದಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (2002 ವರ್ಷದ) ಮಾಹಿತಿಯನ್ನು ನೀಡದಿರುವ ಹಿನ್ನಲೆಯಲ್ಲಿ No mapping ಎಂದು ಗುರುತಿಸಲಾಗಿದ್ದು, ತಂತ್ರಾಂಶದಲ್ಲಿ ತಂತಾನೆ ನೋಟಿಸ್ ಸೃಜನೆಯಾಗಿರುತ್ತದೆ.
ಆದರೆ, ನಟ ಶಿವರಾಜ್ ಕುಮಾರ್ ಅವರನ್ನು ಈಗಾಗಲೇ VIP ಮತದಾರರೆಂದು ಗುರುತು ಮಾಡಲಾಗಿರುವುದರಿಂದ ಅವರಿಗೆ ಯಾವುದೇ ನೋಟಿಸ್ ನೀಡಿರುವುದಿಲ್ಲ. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಇವರನ್ನು ಸಂಪರ್ಕಿಸಿದ್ದು, ಶಿವರಾಜ್ ಕುಮಾರ್ ತಮ್ಮ ಪಾಸ್ಪೋರ್ಟ್ ಪ್ರತಿಯನ್ನು ನೀಡಿರುತ್ತಾರೆ. ಆ ಪಾಸ್ಪೋರ್ಟ್ ಪ್ರತಿಯಲ್ಲಿ ಅವರ ಹೆಸರು ಶಿವಪುಟ್ಟಸ್ವಾಮಿ ಬಿನ್ ಮುತ್ತುರಾಜ್ ಎಂದು ನಮೂದಾಗಿರುತ್ತದೆ. ಇದೇ ಹೆಸರನ್ನು ಮತದಾರರ ಪಟ್ಟಿಯಲ್ಲಿ ನಮೂದಿಸಲು ಅವರು ಕೋರಿರುತ್ತಾರೆ.
ಈ ಸಂಬಂಧ ಅಧಿಕಾರಿಗಳು ನಗರದ ಮಾನ್ಯತಾ ಟೆಕ್ಪಾರ್ಕ್ ಹಿಂಭಾಗದಲ್ಲಿರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯ ನಂತರ ನಟರ ಕೋರಿಕೆಯಂತೆ ನಮೂನೆ-8ರ ಮೂಲಕ ಅವರ ಹೆಸರನ್ನು ನಮೂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ಸ್ಪಷ್ಟಿಕರಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.






