ನಟಿ ರಮ್ಯಾಗೆ ಅಶ್ಲೀಲ ಸಂದೇಶ ಪ್ರಕರಣ: ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಭುವನ್ಗೌಡ ಹಾಗೂ ರಾಜೇಶ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಇದೇ ಪ್ರಕರಣದಲ್ಲಿ ಆಗಸ್ಟ್ 2ರಂದು ಟಿ.ಓಬಣ್ಣ ಹಾಗೂ ಗಂಗಾಧರ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಇನ್ಸ್ಟಾಗ್ರಾಂನ 47 ಖಾತೆಗಳಿಂದ ಆರೋಪಿಗಳು ರಮ್ಯಾ ಅವರಿಗೆ ಅಶ್ಲೀಲ ಹಾಗೂ ಬೆದರಿಕೆ ಸಂದೇಶ ಕಳುಹಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಖಾತೆದಾರರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ದ್ವೇಷಭಾಷಣ ಹಾಗೂ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ರೀತಿ ಬೆದರಿಕೆ ಪ್ರಕರಣಗಳನ್ನು ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಅಡಿಯಲ್ಲಿ ಅಪರಾಧಗಳೆಂದು ಪರಿಗಣಿಸಲಾಗಿದೆ ಎಂದು ಸೀಮಂತ್ಕುಮಾರ್ ಸಿಂಗ್ ಹೇಳಿದರು.
ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಮ್ಯಾ ಅವರು ಜುಲೈ 28ರಂದು ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು. ಆ ದೂರು ಆಧರಿಸಿ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.







