ನಟಿ ರಮ್ಯಾಗೆ ಅಶ್ಲೀಲ ಸಂದೇಶ ಪ್ರಕರಣ : ಬಂಧಿತರ ಸಂಖ್ಯೆ 6ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು, ಆ.12: ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್, ಸಂದೇಶ ರವಾನಿಸಿದ್ದ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಸಿಸಿಬಿಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ವಿಜಯಪುರ ಮೂಲದ ಸಂತೋಷ್ ಎಂಬಾತನನ್ನು ಬಂಧಿಸಲಾಗಿದ್ದು, ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪ್ರಕರಣ ದಾಖಲಾದ ಬಳಿಕ ಓಬಣ್ಣ, ಗಂಗಾಧರ್, ರಾಜೇಶ್, ಭುವನ್ಗೌಡ ಹಾಗೂ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ವಿಜಯಪುರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಸಂತೋಷ್, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದ ಬಳಸಿ ರಮ್ಯಾ ಅವರಿಗೆ ಸಂದೇಶ ಕಳಿಸಿದ್ದ. ಆರೋಪಿ ಬಳಸುತ್ತಿದ್ದ ಖಾತೆಯ ಐಪಿ ಅಡ್ರೆಸ್ ಪತ್ತೆ ಹಚ್ಚಿದ್ದ ಪೊಲೀಸರು ಆತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಅಶ್ಲೀಲ ಸಂದೇಶ ರವಾನೆ, ಕಾಮೆಂಟ್ ಮಾಡುತ್ತಿದ್ದವರ ವಿರುದ್ಧ ಜುಲೈ 28ರಂದು ಖುದ್ದು ರಮ್ಯಾ ಅವರೇ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಂ ಠಾಣೆಗೆ ತೆರಳಿ ದೂರು ನೀಡಿದ್ದರು. ಅದರನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.





