ಬೇಸಿಗೆ ಬಿಸಿಲು | ಪೌರಕಾರ್ಮಿಕರಿಗೆ ವಾರಕ್ಕೊಮ್ಮೆ ರಜೆಯೊಂದಿಗೆ ‘ಅರ್ಧದಿನ ಕೆಲಸ’ ಘೋಷಿಸಿ: ಎಐಸಿಸಿಟಿಯು

ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ಬಿಸಿಲಿನ ತಾಪಮಾನದಿಂದ ಪೌರಕಾರ್ಮಿಕರು ಯಾವುದೇ ಅನಾರೋಗ್ಯಕ್ಕೆ ಗುರಿಯಾಗದಂತೆ ರಕ್ಷಿಸಲು ವೇತನ ಕಡಿತವಿಲ್ಲದೆ, ವಾರಕ್ಕೊಮ್ಮೆ ರಜೆಯೊಂದಿಗೆ ಅರ್ಧದಿನ ಕೆಲಸ ಘೋಷಿಸಬೇಕು ಎಂದು ಆಲ್ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್(ಎಐಸಿಸಿಟಿಯು) ಅಧ್ಯಕ್ಷೆ ನಿರ್ಮಲಾ ಎಂ. ಮನವಿ ಮಾಡಿದ್ದಾರೆ.
ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೌರಕಾರ್ಮಿಕರು ಪ್ರತಿದಿನ ಬೆಳಗ್ಗೆ 6:30 ರಿಂದ ಮಧ್ಯಾಹ್ನ 2:30ರ ವರೆಗೆ ಕೆಲಸ ಮಾಡುತ್ತಾರೆ. ಕೆಲ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿದರೆ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ರಜೆ ಇಲ್ಲದೆ ವಾರದಾದ್ಯಂತ ಕೆಲಸ ಮಾಡುತ್ತಾರೆ. ರಾಷ್ಟ್ರೀಯ ಮತ್ತು ಹಬ್ಬದ ರಜಾ ದಿನಗಳನ್ನೂ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಸ್ಥಳಗಳಲ್ಲಿ ವಿಶ್ರಾಂತಿ ಕೊಠಡಿಗಳಿಲ್ಲ. ಈ ತೊಡಕುಗಳು ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದ ಉಷ್ಣತೆಯು 36.4 ಡಿಗ್ರಿ ಸೆಲ್ಸಿಯಸ್ನಿಂದ 37.2 ಡಿಗ್ರಿ ಸೆಲ್ಸಿಯನ್ ನಡುವೆ ಇರುತ್ತದೆ. ಹೆಚ್ಚಿನ ಹೊರಾಂಗಣ ಅಥವಾ ಒಳಾಂಗಣ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ಶಾಖದ ಒತ್ತಡ ಉಂಟಾಗಬಹುದು. ಇದು ಶಾಖ-ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಆದುದರಿಂದ ಹೊರಾಂಗಣ ಚಟುವಟಿಕೆಗಳನ್ನು ಬೆಳಗ್ಗೆ 11 ಗಂಟೆಯೊಳಗೆ ಅಥವಾ ಸಂಜೆ 4 ಗಂಟೆಯೊಳಗೆ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು ಎಂದು ನಿರ್ಮಲಾ ಒತ್ತಾಯಿಸಿದ್ದಾರೆ.
ಕೆಲಸದ ಸಮಯದಲ್ಲಿ ಹೆಚ್ಚುವರಿ ವಿರಾಮಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರತಿದಿನ ಪೌರಕಾರ್ಮಿಕರಿಗೆ ಕುಡಿಯುವ ನೀರು, ಒಆರ್ಎಸ್ ಮತ್ತು ಮಜ್ಜಿಗೆ ನೀಡಬೇಕು. ಪೌರಕಾರ್ಮಿಕರಿಗೆ ಐಶಡ್ಸ್, ಟೋಪಿಗಳು, ಛತ್ರಿ ಮತ್ತು ಶಾಖದಿಂದ ರಕ್ಷಿಸಲು ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ ಸಹಯೋಗದೊಂದಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆದೇಶಿಸಿದಂತೆ ಎಲ್ಲ ಇತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ಮಲಾ ಆಗ್ರಹಿಸಿದ್ದಾರೆ.







