ಅಕ್ರಮವಾಗಿ ಫೋನ್ ಕರೆ ಸಂಗ್ರಹಣೆ ಆರೋಪ | ಡಿ.ಕೆ.ಸುರೇಶ್ ಸಹೋದರಿ ಎಂದು ವಂಚಿಸಿದ್ದ ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಎಫ್‍ಐಆರ್

ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಕೋಟ್ಯಂತರ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ವಿರುದ್ಧ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಅಕ್ರಮವಾಗಿ ಹಲವು ವ್ಯಕ್ತಿಗಳ ಫೋನ್ ಕರೆ ದಾಖಲೆಗಳನ್ನು (ಸಿಡಿಆರ್) ಪಡೆದುಕೊಂಡಿರುವ ಆರೋಪ ಐಶ್ವರ್ಯಾ ಗೌಡ ವಿರುದ್ಧ ಕೇಳಿ ಬಂದಿದ್ದು, ಖುದ್ದು ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ ಭರತ್ ರೆಡ್ಡಿ ಅವರು ನೀಡಿರುವ ದೂರಿನ ಮೇರೆಗೆ ಬ್ಯಾಟರಾಯನಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಐಶ್ವರ್ಯಾ ಗೌಡರ ಫೋನ್‍ಗಳನ್ನು ವಶಕ್ಕೆ ಪಡೆದುಕೊಂಡು ಡೇಟಾವನ್ನು ಸಂಗ್ರಹಿಸಿದಾಗ ಅದರಲ್ಲಿ ಹಲವು ವ್ಯಕ್ತಿಗಳ ಸಿಡಿಆರ್ ವಿವರಗಳು ಪತ್ತೆಯಾಗಿವೆ.ಫೋನ್ ಕರೆ ದಾಖಲೆಗಳು ಖಾಸಗಿಯಾಗಿದ್ದು, ಆರೋಪಿ ಐಶ್ವರ್ಯಾ ಗೌಡ ಅಕ್ರಮವಾಗಿ ಅನೇಕ ವ್ಯಕ್ತಿಗಳ ಸಿಡಿಆರ್ ಪಡೆದುಕೊಂಡಿರುವುದು ಬಯಲಾಗಿದೆ. ಆದ್ದರಿಂದ ಐಶ್ವರ್ಯಾ ಗೌಡ ಹಾಗೂ ಆಕೆಗೆ ಸಿಡಿಆರ್ ನೀಡಿರುವ ತನಿಖಾ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







