ಶಾಸಕರೊಂದಿಗೆ ಸಭೆ, ಉಪಹಾರ ನಡೆಸುವುದು ಹೊಸದೇನು ಅಲ್ಲ : ಅಜಯ್ ಸಿಂಗ್

ಬೆಂಗಳೂರು, ಫೆ.27: ಶಾಸಕರೊಂದಿಗೆ ಸಭೆ, ಉಪಹಾರ ನಡೆಸುವುದು ಹೊಸದೇನು ಅಲ್ಲ. ಆದರೆ, ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ಸಭೆ, ಉಪಹಾರ ನಡೆಸುವುದು ಹೊಸದೇನು ಅಲ್ಲ. ಮೊದಲಿನಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ನಾಯಕತ್ವದ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ. ನಮ್ಮ ಪಕ್ಷದ ಎಐಸಿಸಿ ಅಧ್ಯಕ್ಷರಿಗೆ ರಾಜ್ಯದ ಸಣ್ಣ ವಿಚಾರವೂ ಗೊತ್ತಿದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುವ ವಿಶ್ವಾಸ ಇದೆ ಎಂದ ಅವರು, ಬಜೆಟ್ ಅಧಿವೇಶನದ ಬಳಿಕ ಸಂಪುಟ ಪುನರ್ ರಚನೆ ಆಗುವ ಮಾತುಗಳು ಕೇಳಿಬಂದಿವೆ. ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಮೂರು ಬಾರಿ ಶಾಸಕನಾಗಿದ್ದೇನೆ, ಮುಖ್ಯ ಸಚೇತಕ, ನವದೆಹಲಿ ಪ್ರತಿನಿಧಿ ಆಗಿದ್ದೇನೆ. ಕೆಕೆಆರ್‍ಡಿಬಿ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವ ಇದೆ ಎಂದು ನುಡಿದರು.







