ಜಾತಿ ಗಣತಿ ವರದಿ ಚರ್ಚೆಗೆ ಸರ್ವಪಕ್ಷ ಸಭೆ : ನಿಖಿಲ್ ಕುಮಾರಸ್ವಾಮಿ ಆಗ್ರಹ

ಬೆಂಗಳೂರು : ಜಾತಿಗಣತಿ ವರದಿಯ ಅಂಕಿ ಅಂಶಗಳ ಬಗ್ಗೆ ಚರ್ಚಿಸಲು ರಾಜ್ಯ ಸರಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ಈ ವರದಿ ಕುರಿತು ಎಲ್ಲಾ ಸಮುದಾಯಗಳ ಸ್ವಾಮೀಜಿಗಳು, ಮುಖಂಡರು, ಬುದ್ದಿಜೀವಿಗಳನ್ನು ಆಹ್ವಾನಿಸಿ ಸಮಾಲೋಚನೆ ನಡೆಸಬೇಕು ಹಾಗೂ ಇದಕ್ಕೆ ಸರ್ವ ಸಮ್ಮತ ಪರಿಹಾರ ಕಂಡುಕೊಳ್ಳಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಶನಿವಾರ ನಗರದಲ್ಲಿರುವ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿ ಗಣತಿಗೆ ಜೆಡಿಎಸ್ ಯಾವುದೇ ಕಾರಣಕ್ಕೂ ವಿರೋಧ ಮಾಡುತ್ತಿಲ್ಲ. ಆದರೆ, ಸಮೀಕ್ಷೆ ಕ್ರಮಬದ್ಧವಾಗಿ ಇಲ್ಲ. ಸೋರಿಕೆ ಆಗಿರುವ ಅಂಕಿ ಅಂಶಗಳ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.
ಸಮೀಕ್ಷೆ ವಿಧಾನವೇ ಸರಿ ಇಲ್ಲ. ಯಾರ ಮನೆಗೆ ಹೋಗಿದ್ದಾರೆ, ಯಾವ ಮಾನದಂಡ ಇಟ್ಟುಕೊಂಡು ಸಮೀಕ್ಷೆ ಮಾಡಿದ್ದಾರೆ ಎಂಬ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಇಡೀ ವರದಿಯನ್ನು ಪುನರ್ ಪರಿಶೀಲನೆ ಮಾಡಬೇಕು. ಮುಖ್ಯಮಂತ್ರಿ ದಿಲ್ಲಿಗೆ ಹೋಗಿ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಕ್ಕೆ ರಾಹುಲ್ ಗಾಂಧಿ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಗಣತಿ ಅಂಕಿ ಅಂಶಗಳು ಸೋರಿಕೆ ಆಗಿದ್ದು ಹೇಗೆ? ಯಾರು ಮಾಡಿದ್ದು? ಇದರ ಉದ್ದೇಶ ಏನು? ಎಂದು ಅವರು ಪ್ರಶ್ನಿಸಿದರು.
ಸರಕಾರ ಮಾಡಿದ್ದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಸೋರಿಕೆ ಆಗಿದ್ದು ಜಾತಿ ಅಂಕಿ ಅಂಶ. ಯಾವ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದೆ ಉಳಿದಿದೆ ಎಂಬ ಮಾಹಿತಿಯೇ ಇಲ್ಲ. ಮುಸ್ಲಿಮರಲ್ಲಿ ಶಿಯಾ, ಸುನ್ನಿ ಸೇರಿ 60 ಉಪ ಜಾತಿ ಬರುತ್ತವೆ. ಕ್ರಿಶ್ಚಿಯನ್ನರಲ್ಲಿ ಅನೇಕ ಉಪ ಜಾತಿ ಬರುತ್ತವೆ. ಅವರನ್ನು ಒಗ್ಗೂಡಿಸಿ ಕೆಲ ಜಾತಿಗಳನ್ನು ಮಾತ್ರ ಛಿದ್ರ ಮಾಡಿದ್ದಾರೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂದು ನಿಖಿಲ್ ಕುಮಾರಸ್ವಾಮಿ ಕೇಳಿದರು.
ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದರು. ಸಮೀಕ್ಷೆ ಹೆಸರಿನಲ್ಲಿ ಜಾತಿ ಜಾತಿ ಒಡೆದು ಕರ್ನಾಟಕ ರಾಜ್ಯಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಾ ಮಿಸ್ಟರ್ ರಾಹುಲ್ ಗಾಂಧಿ ಅವರೇ? ಜನ ಬೀದಿಬೀದಿಗಳಲ್ಲಿ ಹೊಡೆದಾಡಬೇಕಾ? ಇದೇನಾ ನಿಮ್ಮ ಜೋಡೋ ಯಾತ್ರೆ. ನೀವು ಮಾಡುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ನೀವು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಯಾತ್ರೆ ಮಾಡುವ ದಿನ ದೂರವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ವಿರುದ್ಧ ವಾಗ್ದಾಳಿ :
ಪೆನ್ನು ಪೇಪರ್ ಕೊಡಿ ಅಂತ ಕೇಳಿ, ಅಂಗಲಾಚಿ ಪಡೆಕೊಂಡರಲ್ಲ ಡಿ.ಕೆ.ಶಿವಕುಮಾರ್ ಅವರೇ, ಮೊನ್ನೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ಖಾಲಿ ಸಿಲಿಂಡರ್ ಎತ್ತಿಕೊಂಡು ಪೊಸ್ ಕೊಟ್ಟರಲ್ಲಾ, ಖಾಲಿ ಗ್ಯಾಸ್ ಸಿಲಿಂಡರ್ ಎತ್ತೋಕೆ ನೀವೇ ಬೇಕಾ ಶಿವಕುಮಾರಣ್ಣ ? ಭಾರವನ್ನೆಲ್ಲಾ ಜನರ ಮೇಲೆ ಹಾಕಿ ನೀವು ಮಾತ್ರ ಖಾಲಿ ಸಿಲಿಂಡರ್ ಎತ್ತುತ್ತಿರಿ, ಎಂತಹ ನಾಟಕ, ಎಂತಹ ನಟನೆ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.
2015ರಲ್ಲಿ ನಡೆದ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎಂದು ಸ್ವತಃ ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ ಹೇಳಿಕೆ ನೀಡಿದ್ದರು. ಅಲ್ಲದೇ, ಸಮೀಕ್ಷೆಯಲ್ಲಿ ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಹೇಳಿದ್ದರು. ವೈಜ್ಞಾನಿಕವಾಗಿ ಈ ಸಮೀಕ್ಷೆ ನಡೆದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದರು. ಅಲ್ಲದೇ, ಆ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಲಿಲ್ಲ. ಆದುದರಿಂದ, ಆ ವರದಿಯನ್ನು ಸರಕಾರ ಆಗ ಒಪ್ಪಲಿಲ್ಲ ಎಂದು ಎಂದು ಅವರು ಸ್ಪಷ್ಟಪಡಿಸಿದರು.
ಆನಂತರ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಸರಕಾರಕ್ಕೆ ಪತ್ರ ಬರೆದು, ಸಮೀಕ್ಷೆಯ ಮೂಲ ಪ್ರತಿ ನಾಪತ್ತೆಯಾಗಿದೆ ಎಂದು ತಿಳಿಸಿದ್ದರು. 170 ಕೋಟಿ ರೂ. ಜನರ ತೆರಿಗೆ ಹಣ ಖರ್ಚು ಮಾಡಿ ತಯಾರಿಸಿದ ಸಮೀಕ್ಷೆಯ ಮೂಲ ಪ್ರತಿಯೇ ನಾಪತ್ತೆಯಾದರೆ ಹೇಗೇ ? ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮುಖಂಡರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ವಕ್ತಾರರಾದ ಎಚ್.ಎನ್.ದೇವರಾಜು, ನರಸಿಂಹಮೂರ್ತಿ, ರಾಜೂಗೌಡ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







