ವಿಎಒ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿದ ಅಭ್ಯರ್ಥಿಗಳಿಗೆ ಮಾನಸಿಕ ಕಿರುಕುಳ ಆರೋಪ: ಸಮಗ್ರ ತನಿಖೆಗೆ ಆಶಾ ಮೂಡಿಗೆರೆ ಆಗ್ರಹ

ಬೆಂಗಳೂರು: ಅ.4, 2026ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಗ್ರಾಮ ಆಡಳಿತಾಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯ ಸಂದರ್ಭದಲ್ಲಿ ಹಿಜಾಬ್ ಹಾಗೂ ವೇಲ್ ಧರಿಸಿದ್ದ ಮಹಿಳಾ ಪರೀಕ್ಷಾರ್ಥಿಗಳನ್ನು ತಡೆದು ನಿಲ್ಲಿಸಿ, ಗೊಂದಲದ ವಾತಾವರಣ ಸೃಷ್ಟಿಸುವ ಮೂಲಕ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿರುವ ವಿಮೆನ್ ಇಂಡಿಯಾ ಮೂವ್ಮೆಂಟ್‌ನ ರಾಜ್ಯ ಕಾರ್ಯದರ್ಶಿ ಆಶಾ ಮೂಡಿಗೆರೆ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಉಂಟಾದ ಅವ್ಯವಸ್ಥೆ ಹಾಗೂ ಅಭ್ಯರ್ಥಿಗಳು ಎದುರಿಸಿದ ಮಾನಸಿಕ ಒತ್ತಡದ ಕುರಿತು ಸಮಗ್ರ ತನಿಖೆ ನಡೆಸಬೇಕು. ಮುಂಬರುವ ಪರೀಕ್ಷೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಆಶಾ ಮೂಡಿಗೆರೆ, ತಿಂಗಳುಗಟ್ಟಲೆ ಹಗಲು-ರಾತ್ರಿ ಎನ್ನದೆ ಶ್ರಮಪಟ್ಟು ಪರೀಕ್ಷೆಗೆ ಸಿದ್ಧರಾಗಿ ಬರುವ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಬಾಗಿಲಲ್ಲಿ ಗಂಟೆಗಟ್ಟಲೆ ನಿಲ್ಲಿಸಿ, ಅನಗತ್ಯ ಚರ್ಚೆ ನಡೆಸುವ ಮೂಲಕ ಅವರ ಆತ್ಮವಿಶ್ವಾಸ ಕುಗ್ಗಿಸುವುದು ವಿಷಾದನೀಯ ಎಂದರು.
“ಸುಮಾರು 30 ನಿಮಿಷಗಳ ಕಾಲ ಅಭ್ಯರ್ಥಿಗಳನ್ನು ಮಾನಸಿಕ ಒತ್ತಡಕ್ಕೆ ತಳ್ಳಿದ್ದು, ಅವರು ಅಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಇದು ಅವರ ಹಕ್ಕುಗಳು ಹಾಗೂ ಘನತೆಗೆ ಎಸಗಿದ ಅಪಚಾರವಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.
“ಈ ವಿಷಯವನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿ ನೋಡಬಾರದು. ಧಾರ್ಮಿಕ, ಸಾಂಸ್ಕೃತಿಕ ಅಥವಾ ವೈಯಕ್ತಿಕ ಕಾರಣಗಳಿಂದ ತಲೆ ಮತ್ತು ಎದೆಯ ಭಾಗವನ್ನು ಆವರಿಸಿಕೊಳ್ಳುವ ಪ್ರತಿಯೊಬ್ಬ ಮಹಿಳಾ ಅಭ್ಯರ್ಥಿಯ ಗೌರವ, ಖಾಸಗಿತನ ಹಾಗೂ ಸಮಾನ ಅವಕಾಶಗಳ ಹಕ್ಕಿನ ಪ್ರಶ್ನೆ ಇದಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವುದು ಮತ್ತು ಭದ್ರತೆಯನ್ನು ಕಾಪಾಡುವುದು ಎಷ್ಟು ಮುಖ್ಯವೋ, ನಿಯಮಗಳ ಅನುಷ್ಠಾನದ ಹೆಸರಿನಲ್ಲಿ ಮಹಿಳೆಯರನ್ನು ಮುಜುಗರಕ್ಕೊಳಪಡಿಸದಿರುವುದೂ ಅಷ್ಟೇ ಮುಖ್ಯ” ಎಂದು ಪ್ರತಿಪಾದಿಸಿದರು.
ಅಕ್ಟೋಬರ್ 4ರಂದು ನಡೆದ ವಿಎಒ ಪರೀಕ್ಷೆಯ ವೇಳೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಎದುರಿಸಿದ ತೊಂದರೆ ಹಾಗೂ ಗೊಂದಲಗಳ ಕುರಿತು ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಪರೀಕ್ಷೆಗೆ ಮುನ್ನವೇ ವಸ್ತ್ರಸಂಹಿತೆಯ ನಿಯಮಗಳನ್ನು ಸ್ಪಷ್ಟವಾಗಿ ಪ್ರಕಟಿಸಿ, ಹಿಜಾಬ್, ವೇಲ್ ಹಾಗೂ ಸಾಂಪ್ರದಾಯಿಕ ಉಡುಪುಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಭದ್ರತಾ ತಪಾಸಣೆಯನ್ನು ಮಹಿಳಾ ಸಿಬ್ಬಂದಿಯ ಮೂಲಕವೇ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಅಭ್ಯರ್ಥಿಗಳ ಖಾಸಗಿತನ ಮತ್ತು ಘನತೆಗೆ ಭಂಗವಾಗದಂತೆ ಪ್ರತ್ಯೇಕ ಕೊಠಡಿಗಳಲ್ಲಿ ತಪಾಸಣೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ಅಭ್ಯರ್ಥಿಗಳ ಹಕ್ಕುಗಳು ಮತ್ತು ಗೌರವಯುತ ವರ್ತನೆಯ ಕುರಿತು ಪೂರ್ವಭಾವಿ ತರಬೇತಿ ನೀಡಬೇಕು. ಪರೀಕ್ಷಾ ದಿನದಂದು ವಸ್ತ್ರಕ್ಕೆ ಸಂಬಂಧಿಸಿದ ಗೊಂದಲಗಳು ಎದುರಾದರೆ, ಸ್ಥಳದಲ್ಲೇ ತಕ್ಷಣ ಪರಿಹರಿಸಿ ಅಭ್ಯರ್ಥಿಗಳ ಪರೀಕ್ಷಾ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲು ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರ ಹಾಗೂ ಪರೀಕ್ಷಾ ಪ್ರಾಧಿಕಾರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಕೈಗೊಂಡ ಕ್ರಮಗಳ ಕುರಿತು ಲಿಖಿತ ವಿವರಣೆ ನೀಡಬೇಕು ಎಂದು ಆಶಾ ಮೂಡಿಗೆರೆ ಆಗ್ರಹಿಸಿದ್ದಾರೆ.






