ಇ20 ಪೆಟ್ರೋಲ್ ಹೆಸರಿನಲ್ಲಿ ಶೇ.30ರಷ್ಟು ಎಥೆನಾಲ್ ಮಿಶ್ರಣದ ಆರೋಪ : ಕೇಂದ್ರದ ವಿರುದ್ಧ ಕಾಂಗ್ರೆಸ್ ಅಣಕು ಪ್ರದರ್ಶನ

ಬೆಂಗಳೂರು : ದೇಶದಲ್ಲಿ ಇ20(ಶೇ.20 ಎಥೆನಾಲ್ ಮಿಶ್ರಿತ) ಪೆಟ್ರೋಲ್ ಎಂದು ಹೇಳಿ ಶೇ.30ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಸೋಮವಾರ ನಗರದ ಶೇಷಾದ್ರಿಪುರಂ ಸಮೀಪದ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಮುಖಂಡರು ಅಣಕು ಪ್ರದರ್ಶನದ ಮೂಲಕ ಜನಜಾಗೃತಿ ಅಭಿಯಾನ ಆರಂಭಿಸಿದರು.
ಈ ವೇಳೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮಾತನಾಡಿ, ರಾಜ್ಯ ಸರಕಾರ ನಡೆಸಿದ ಇತ್ತೀಚಿನ ಪರೀಕ್ಷೆಗಳಲ್ಲಿ ಕೆಲವು ಪೆಟ್ರೋಲ್ ಮಾದರಿಗಳಲ್ಲಿ ಶೇ.26ರಿಂದ 31ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ. ಇ20 ಎಂದು ಹೇಳಿ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡುತ್ತಿರುವುದು ಸತ್ಯವಾಗಿದ್ದರೆ, ಇದು ಕೋಟ್ಯಂತರ ವಾಹನ ಸವಾರರು ಹಾಗೂ ಗ್ರಾಹಕರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್‌ನಲ್ಲಿ ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣವಾಗಿರುವ ಆರೋಪಕ್ಕೆ ಕೇಂದ್ರ ಸರಕಾರ ಉತ್ತರಿಸಬೇಕು. ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾದರೆ ಅಥವಾ ಇಂಜಿನ್‌ಗಳಿಗೆ ಹಾನಿಯಾದರೆ ಅದರ ಹೊಣೆ ಯಾರು ಹೊರುತ್ತಾರೆ? ಗ್ರಾಹಕರು ಪೂರ್ಣ ಬೆಲೆ ಪಾವತಿಸಿ ಗುಣಮಟ್ಟದ ಪೆಟ್ರೋಲ್ ಪಡೆಯುವ ಹಕ್ಕನ್ನು ರಕ್ಷಿಸುವವರು ಯಾರು? ಪೆಟ್ರೋಲ್‌ನಲ್ಲಿರುವ ನಿಖರ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಲು ಕೇಂದ್ರ ಸರಕಾರ ಸಿದ್ಧವಿದೆಯೇ ಎಂದು ಮನೋಹರ್ ಪ್ರಶ್ನಿಸಿದರು.
ಶೇ.30ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಸರಬರಾಜು ಮಾಡಿರುವ ಆರೋಪ ಎದುರಿಸುತ್ತಿರುವ ತೈಲ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇದರಿಂದ ನಷ್ಟ ಅನುಭವಿಸಿರುವ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಮನೋಹರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಎ.ಆನಂದ್, ಕುಶಾಲ್ ಹರುವೆಗೌಡ, ಲಕ್ಷ್ಮೀನಾರಾಯಣ್, ಎಂ.ಎಸ್.ಆನಂದ್ ಕುಮಾರ್, ಪುಟ್ಟರಾಜು, ಬಾಲಾಜಿ ಡಿ., ಪವನ್, ಪ್ರವೀಣ್ ರಾವ್, ಸುಧಾಕರ್ ರಾವ್, ಓಬಳೇಶ್, ಹಲವರು ಭಾಗವಹಿಸಿದ್ದರು.






